ಭಾರತದಿಂದ ಶಾಂತಿ ಸ್ಥಾಪನೆ, ಅಮೆರಿಕಕ್ಕೆ ಮಹಿಳಾ ಅಧ್ಯಕ್ಷೆಯಾದರೂ ಆರ್ಥಿಕತೆ ವೃದ್ಧಿ ಸಾಧ್ಯತೆ ಕ್ಷೀಣ, ಏಷ್ಯಾ, ಐರೋಪ್ಯ, ಆಫ್ರಿಕಾ ರಾಷ್ಟ್ರಗಳಲ್ಲಿ ವಿಕೋಪಗಳ ವಿಜೃಂಭಣೆ... ಜಾಗತಿಕ ಭವಿಷ್ಯ ನುಡಿದ ರಾಜಗುರು ಬಿ.ಎಸ್. ದ್ವಾರಕಾನಾಥ್ ಗುರೂಜಿ ( Dwarakanath Guruji ).
ಹಬ್ಬ ಹರಿದಿನಗಳು, ಋಷಿ-ಮಹಾತ್ಮರ ದಿನಾಚರಣೆಗಳು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ಅಂತಹ ಮಹತ್ವದ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ‘ಜ್ಯೋತಿಂ ನಿತ್ಯ ಸತತಂ’ ಎಂಬ ವಾಕ್ಯದಂತೆ ಮನುಷ್ಯನಿಗೆ ದೀಪದ ಬೆಳಕಿದ್ದಲ್ಲಿ ನಡೆಯಲು ಸಾಧ್ಯ. ಹಾಗೆಯೇ ಜ್ಯೋತಿರ್ಮಯವಾದ ದೀಪಾವಳಿಯು ಈ ಪ್ರಪಂಚದ ಮಾನವಕೋಟಿಗೂ, ಮೃಗ ಪಕ್ಷಿಗಳಿಗೂ, ಪಂಚಭೂತಾತ್ಮಗಳಿಗೂ ಚೈತನ್ಯ ನೀಡುತ್ತದೆ. ಪ್ರತಿಯೊಬ್ಬ ಮನುಷ್ಯನೂ ತನ್ನ ಧರ್ಮದಲ್ಲಿ ಸಾಗಿ ಧಮೋಪಾಸನೆ ಮಾಡಿ ಶ್ರೇಯಸ್ಸು ಹೊಂದಿ ಸುಖ ಶಾಂತಿ, ಆರೋಗ್ಯ ಪಡೆಯಲು ದಕ್ಷಿಣಾಮೂರ್ತಿ ದೇವರಲ್ಲಿ ಪ್ರಾರ್ಥಿಸಬೇಕಾಗಿದೆ.
ಕ್ರೋಧಿನಾಮ ಸಂವತ್ಸರದ ದೀಪಾವಳಿ ಹಬ್ಬವು ಅ. 31ರಂದು ಆಚರಣೆಯಾಗಲಿದ್ದು, ಎಲ್ಲರಿಗೂ ಒಳಿತಾಗುವ ಸಾಧ್ಯತೆ ಹೆಚ್ಚಿದೆ. ವಕ್ರ ಸ್ಥಿತಿಯಲ್ಲಿ ಗುರುವು ಇರುವುದರಿಂದ ದಕ್ಷಿಣಾಮೂರ್ತಿಯೇ ರಾಜ್ಯ, ರಾಷ್ಟ್ರವನ್ನು ಆಳುವವರಿಗೆ ಸದ್ಬುದ್ಧಿಯನ್ನು ನೀಡಿ ಯಾರೂ ಧರ್ಮ, ನ್ಯಾಯಕ್ಕೆ ಗೊಂದಲ ಉಂಟು ಮಾಡದೆ ನಡೆದುಕೊಂಡರೆ ದೇಶಕ್ಕೆ ಹಿತವಾಗುತ್ತದೆ. ಕಳೆದ ಏಳು ತಿಂಗಳಲ್ಲಿ ಹಲವು ಏರುಪೇರು ಕಂಡಿದ್ದು, ಈ ಸಂವತ್ಸರವೇ ಸೂಚಿಸುವಂತೆ ಎಷ್ಟೋ ಕ್ರೋಧವು ರಾಜಕಾರಣದಲ್ಲಿ ಬೆರೆತುಹೋಗಿದೆ. ಜನರಲ್ಲಿ ಸ್ವಾರ್ಥ, ಭ್ರಷ್ಟತೆ, ಧರ್ಮದಲ್ಲೂ ನ್ಯಾಯದಲ್ಲೂ ತಲೆ ಹಾಗೂ ಕೈಯನ್ನು ಆಡಿಸುವುದು ಹೆಚ್ಚಿದೆ. ಈ ಸನ್ನಿವೇಶವು ನ. 15ರವರೆಗೆ ಮುಂದುವರಿಯುತ್ತದೆ. ಆದರೆ, ಗುರುವು ವಕ್ರವಾಗಿರುವುದರಿಂದ ಜನರಿಗೆ ರಾಜ್ಯಗಳ ಅಂತಃಕಲಹದಿಂದ ನೆಮ್ಮದಿಯಾಗಲಿ, ಅವರಿಗೆ ಬೇಕಾದ ಸಂತೋಷಪಡುವಂತಹ ಸ್ಥಿತಿ ನಿರ್ವಣವಾಗದು. ಈ ಮಧ್ಯೆ, ಅಕಾಲಿಕ ಮಳೆಯಾಗಿ ಬೆಳೆ, ಬಿಸಿಲು ಇರಲಿದ್ದು, ಈ ಪರಿಸ್ಥಿತಿ ನವೆಂಬರ್- ಡಿಸೆಂಬರ್ವರೆಗೂ ಮುಂದುವರಿಯುವ ಸಾಧ್ಯತೆ ಹೆಚ್ಚಿರುತ್ತದೆ.
ಆಳುವವರು ಜನಕಲ್ಯಾಣಕ್ಕೆ ಮಣೆ ಹಾಕಿ ಅವರ ಬೇಕು- ಬೇಡಗಳನ್ನು ನಿರ್ಷRಸಿ ಆಡಳಿತ ನೀಡಿದರೆ ಜನರು ಸುಖ- ಸಂತೋಷದಿಂದ ಇರಲು ಸಾಧ್ಯ. ಇದನ್ನು ಅರ್ಥ ಮಾಡಿಕೊಳ್ಳದೆ ಅಧಿಕಾರದ ಅಹಂಕಾರ, ದ್ವೇಷ ಸಾಧನೆಗೆ ಜೋತುಬಿದ್ದಲ್ಲಿ ಮತದಾರರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ.
ವಿಶ್ವಮಟ್ಟದ ಕೀರ್ತಿಗೆ ಭಾರತ ಭಾಜನ: ಪ್ರಸ್ತುತ ರಷ್ಯಾ- ಯೂಕ್ರೇನ್, ಇಸ್ರೇಲ್- ಪ್ಯಾಲೆಸ್ತೇನ್ ಮಧ್ಯೆ ಯುದ್ಧ ನಡೆಯುತ್ತಿದೆ. ಯುದ್ಧದ ಸೂಚನೆಗೆ ಕುಜ- ಶನಿ ಒಟ್ಟಾಗಿದ್ದಾಗ ಹೆಚ್ಚಿನ ಪ್ರಭಾವ ಇರುತ್ತದೆ. ಪ್ರಪಂಚದ ಇತರೆಡೆಯೂ ಯುದ್ಧಕ್ಕೆ ಪ್ರಚೋದಿಸುವ ಸಾಧ್ಯತೆಯೂ ಹೆಚ್ಚಿದೆ. ಇದರಲ್ಲಿ ಭಾರತವನ್ನು ಆಳುವವರು ಮುಂದುವರಿದು ಖಂಡಿತವಾಗಿಯೂ ಯುದ್ಧಭೀತಿಯನ್ನು ನಿಲ್ಲಿಸಿ ಶಾಂತಿ ನೆಲೆಸಲು ಕ್ರಮ ಕೈಗೊಂಡಲ್ಲಿ ದೇವರೇ ಅನುಗ್ರಹಿಸಿ ವಿಶ್ವಶಾಂತಿ ತಂದ ಕೀರ್ತಿಗೆ ಭಾರತ ಭಾಜನವಾಗುವ ನಿರೀಕ್ಷೆ ಇದೆ. ಇದನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿ ಅಮೆರಿಕದ ವಿಶ್ವಾಸದೊಂದಿಗೆ ಮುಂದಡಿ ಇಟ್ಟಲ್ಲಿ ಯಶಸ್ಸು ಸಾಧ್ಯ. ಆದರೆ, ರಷ್ಯಾ ದೇಶವು ಭಾರತ ಹೇಳಿದಂತೆ ಕೇಳಿದರೆ ಇಡೀ ಪ್ರಪಂಚಕ್ಕೆ ಒಳಿತಾಗಲಿದೆ. ಇದರಿಂದ ಯುದ್ಧ ಕೊನೆಗೊಂಡು ಭಾರತ ವಿಶ್ವಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಿದೆ.
ಈ ಸಂವತ್ಸರದಲ್ಲಿ ಯೋಚಿಸಿದವರಿಗೆ, ಪ್ರಯತ್ನಪಡುವವರಿಗೆ ಬೇಕಾದ ಸ್ಥಾನಮಾನ ಸಿಗದು. ಇದಕ್ಕೆ ಅಮರಿಕದ ವಿದ್ಯಮಾನ ಸಾಕ್ಷಿಯಾಗಲಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹಿಳೆಯೊಬ್ಬರು ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿದೆ. ಆದರೆ, ಆಕೆಯಿಂದ ಸಮರ್ಥ ಆಡಳಿತ ಅನುಮಾನ. ಆಕೆ ಆರ್ಥಿಕ ಸುಧಾರಣೆ ತರುವುದೂ ಕಷ್ಟ. ಜನರಿಗೆ ಉಚಿತ ಕೊಡುಗೆಗಳನ್ನು ನೀಡುತ್ತಿರುವುದು ಬ್ರಿಟನ್ ದೇಶವನ್ನು ದಿವಾಳಿ ಅಂಚಿಗೆ ತಲುಪಿಸಲಿದೆ. ಜತೆಗೆ ಈ ದೇಶವು ಜಲಕಂಟಕ ಎದುರಿಸಬೇಕಾಗುತ್ತದೆ. ಆಸ್ಟ್ರೇಲಿಯಾವು ಮತೀಯ ಗಲಭೆಯಿಂದ ತೊಂದರೆಗೆ ಸಿಲುಕಲಿದೆ.
ಪಾಕಿಸ್ತಾನದಲ್ಲಿ ಅನ್ನ, ನೀರಿಗೆ ತೊಂದರೆ ಆಗುತ್ತದೆ. ಅಲ್ಲಿನ ಪಕ್ಷಗಳ ಮಧ್ಯೆ ಹೊಡೆದಾಟವಾಗಿ ಜನರಿಗೆ ಶಾಂತಿ ಕದಡಿದಂತಾಗುತ್ತದೆ. ಈ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ನಡೆದುಕೊಳ್ಳುವ ತಂತ್ರಗಾರಿಕೆಗೆ ಮೊರೆ ಹೋಗುವುದು ಒಳಿತು. ಬಾಂಗ್ಲಾದೇಶದಲ್ಲಿ ಆಹಾರ, ಜಲ ಕಂಟಕವಿದ್ದು, ಅಲ್ಲಿನ ಪ್ರಜೆಗಳು ಭಾರತಕ್ಕೆ ನುಸುಳುವ ಸಾಧ್ಯತೆ ಇದೆ. ನೇಪಾಳ ಹಾಗೂ ಶ್ರೀಲಂಕಾ ದೇಶಗಳು ಕೂಡ ತಮ್ಮ ಅಸ್ತಿತ್ವಕ್ಕಾಗಿ ಭಾರತವನ್ನು ಆಶ್ರಯಿಸುವ ಸಾಧ್ಯತೆ ಇದೆ.
ಆಫ್ರಿಕಾ ದೇಶಗಳಲ್ಲಿ ಕಾಡಿಗೆ ಬೆಂಕಿ ಬೀಳುವ ಸಾಧ್ಯತೆ ಇದೆ. ಮುಸ್ಲಿಂ ರಾಷ್ಟ್ರಗಳಲ್ಲಿ ಪರಸ್ಪರ ವಿರೋಧದಿಂದಾಗಿ ತಮ್ಮ ಬಲವನ್ನು ಕಳೆದುಕೊಳ್ಳಲಿದ್ದಾರೆ. ಮುಂದಿನ ಮೇ ತಿಂಗಳಿನಲ್ಲಿ ಗುರುವು ಮಿಥುನ ರಾಶಿಗೆ ಬಂದು ಬುಧನ ಮನೆ ಸೇರುತ್ತಾನೆ. ಇದರಿಂದ ವಿಶ್ವದ ವಿವಿಧೆಡೆ ಕಾಡ್ಗಿಚ್ಚು, ವಿಮಾನ ದುರಂತ, ಹಡಗುಗಳ ಕಣ್ಮರೆ, ರೈಲು ಅಪಘಾತ ಸಂಭವಿಸುವ ಸಾಧ್ಯತೆ ಉಂಟು.
ಚೀನಾ ದೇಶವು ನಮ್ಮ ದೇಶದೊಳಕ್ಕೆ ನುಸುಳಲು ಪಿತೂರಿ ಮಾಡಿ ನಮ್ಮ ಜಾಗವನ್ನು ಆಕ್ರಮಿಸಿಕೊಳ್ಳುವ ಯತ್ನ ಮಾಡಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ನಮ್ಮ ಭೂಭಾಗವನ್ನು ರಕ್ಷಿಸಿಕೊಳ್ಳಲು ಅಲ್ಲಿಗೆ ಹೆಚ್ಚಿನ ಸೈನಿಕರನ್ನು ನಿಯೋಜಿಸಿ, ಬೇಹುಗಾರಿಕೆಗೆ ಒತ್ತು ನೀಡಬೇಕಿದೆ. ಈ ವಿಷಯದಲ್ಲಿ ಆಡಳಿತಗಾರರು ಹೆಚ್ಚು ಜಾಗೃತರಾಗಿರಬೇಕಿದೆ.
ಉತ್ತರ ಭಾರತದಲ್ಲಿ ಭೂಕುಸಿತ ಕಾಣಿಸಿಕೊಳ್ಳಲಿದೆ. ರಾಷ್ಟ್ರ ಮಟ್ಟದಲ್ಲಿ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದರೆ ಚರ್ಮಕ್ಕೆ ಸಂಬಂಧಿಸಿದ ಸಣ್ಣ ರೋಗವು ಮರುಕಳಿಸಲಿದೆ. ಕ್ರೀಡೆಯಲ್ಲಿ ರಾಷ್ಟ್ರವು ಮುಂಚೂಣಿಗೆ ಬರಲಿದೆ. ಸಿನಿಮಾ, ಎಲೆಕ್ಟ್ರಾನಿಕ್ಸ್, ತಂತ್ರಜ್ಞಾನ, ಸಂಶೋಧನೆ, ಜ್ಞಾನ- ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲಿದೆ. ಮುಖ್ಯವಾಗಿ ಬಾಹ್ಯಾಕಾಶ, ರಕ್ಷಣೆ, ಬೇಹುಗಾರಿಕೆ ವಿಭಾಗಕ್ಕೆ ಆದ್ಯತೆ ನೀಡುವ ಜತೆಗೆ ಹೆಚ್ಚಿನ ಅನುದಾನವನ್ನೂ ಒದಗಿಸಬೇಕು. ಇದರಿಂದ ಆಕರ್ಷಿತರಾಗಿ ಅನಿವಾಸಿ ಭಾರತೀಯರು ಸ್ವದೇಶಕ್ಕೆ ಮರಳಿ ಇಲ್ಲಿನ ಅಭಿವೃದ್ಧಿಯಲ್ಲಿ ಕೈಜೋಡಿಸಿ ಯಶಸ್ವಿಯಾಗುತ್ತಾರೆ. ರಾಷ್ಟ್ರಮಟ್ಟದಲ್ಲಿ ದೇಶಕ್ಕಾಗಿ ದುಡಿದ ಹಿರಿಯರೊಬ್ಬರು ಕಣ್ಮರೆಯಾಗುವ ಸಂಭವ ಇದೆ.
ದೇಶದಲ್ಲಿ ಚರ್ಚೆಗೆ ಒಳಗಾಗಿರುವ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಯನ್ನು ಜಾರಿ ಮಾಡುವುದರಿಂದ ಅಷ್ಟು ಫಲ ನೀಡದು. ಗುರು- ಶನಿಯ ಸಂಚಾರವೇ ಇದಕ್ಕೆ ಕಾರಣವಾಗಬಹುದು. ಉತ್ತರಪ್ರದೇಶದಲ್ಲಿ ಆಳುವ ಪಕ್ಷಕ್ಕೆ ಪ್ರತಿಪಕ್ಷಗಳು ಪೈಪೋಟಿ ನೀಡುತ್ತಿವೆ. ಇದನ್ನು ಅರಿತು ಆಳುವವರು ಮುನ್ನಡೆಯಬೇಕಿದೆ. ಪ್ರಾದೇಶಿಕ ಪಕ್ಷವು ಬಲಗೊಳ್ಳುವ ಕುರುಹು ಕಾಣಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಸರ್ಕಾರದಿಂದ ಜನರಿಗೆ ಸಿಗಬೇಕಾದ ಸೌಲಭ್ಯ ಸಿಗದೆ ಮತದಾರರು ನಿರಾಶರಾಗುವ ಸಾಧ್ಯತೆ ಇದೆ.
ದೇಶದೆಲ್ಲೆಡೆ ಮಳೆಯಿಂದ ಒಂದಿಷ್ಟು ಹಾನಿಯಾದರೂ, ಬೆಳೆಗಳಿಂದ ಜನರಿಗೆ ಬೇಕಾದ ಆಹಾರಧಾನ್ಯ ಸಿಗಲು ಅಡ್ಡಿಯಿಲ್ಲ. ವ್ಯವಸಾಯ ಉತ್ತಮವಾಗಿರುತ್ತದೆ. ರೈತರ ಬಗ್ಗೆ ಸರ್ಕಾರವು ಇನ್ನಷ್ಟು ಸಹಾನುಭೂತಿ ಹೊಂದಬೇಕು. ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ ರೈತರೇ ತಮಗೆ ಬೇಕಾದ್ದನ್ನು ಪಡೆದುಕೊಳ್ಳುತ್ತಾರೆ. ಇದಕ್ಕೆ ಅಡ್ಡಿ ಮಾಡಿದರೆ ರೈತರು ಆಂದೋಲನಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ ಸತತ 10 ವರ್ಷ ಯಶಸ್ವಿ ಆಡಳಿತ ನಡೆಸಿತು. ಈ ಅವಧಿಯಲ್ಲಿ ನರೇಂದ್ರ ಮೋದಿ ಅವರು ತಮ್ಮ ಬಲವನ್ನು ವೃದ್ಧಿಸಿಕೊಂಡರು. ‘ಮೋದಿಯೇ ಬಿಜೆಪಿ, ಬಿಜೆಪಿಯೇ ಮೋದಿ’ ಎಂಬ ಮಾತು ಕೇಳಿಬಂತು. ಅವರೆಂದೂ ಸ್ವಾರ್ಥಕ್ಕೆ ಏನನ್ನೂ ಮಾಡಿಕೊಂಡಿಲ್ಲ, ಭ್ರಷ್ಟರೂ ಆಗಲಿಲ್ಲ. ಆದರೆ, ನಂತರದಲ್ಲಿ ‘ನಾನು’ ಎಂಬುದು ಸ್ವಲ್ಪಮಟ್ಟಿಗೆ ಮುನ್ನೆಲೆಗೆ ಬಂದಂತಿದೆ. ಜನರಿಗೆ ನೀಡಿದ್ದ ಕೆಲವು ಭರವಸೆಗಳು ಈಡೇರದಿರುವುದು ಮೂರನೇ ಬಾರಿ ಪ್ರಧಾನಿಯಾದರೂ, ಮಿತ್ರಪಕ್ಷಗಳನ್ನು ಅವಲಂಬಿಸಬೇಕಾಯಿತು. ಮುಂದಿನ ವರ್ಷದ ಯುಗಾದಿ ವೇಳೆ ಮಿತ್ರ ಪಕ್ಷಗಳ ಕೈ ಮೇಲಾಗುವ ಸಾಧ್ಯತೆ ಇದೆ. ಈ ಹಂತದಲ್ಲಿ ಪ್ರಧಾನಿ ಎಚ್ಚರಿಕೆಯ ರಾಜಕೀಯ ಜಾಣ್ಮೆ ಪ್ರದರ್ಶಿಸಬೇಕು. ಮಾತಿಗಿಂತ ಮೌನ ಲೇಸು ಎಂಬುದಕ್ಕೆ ಮಣೆ ಹಾಕಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಅಧಿಕಾರದ ಬಗ್ಗೆ ಊಹಾಪೋಹ ಏಳಬಹುದು. ಇದಕ್ಕೆ ಆಸ್ಪದ ನೀಡದಿರಲು ಜನಕಲ್ಯಾಣವೇ ಸರ್ಕಾರದ ಆದ್ಯತೆ ಆಗಬೇಕು. ಮುಖ್ಯವಾಗಿ 30 ವರ್ಷಗಳ ದಿಕ್ಸೂಚಿಯನ್ನಾಧರಿಸಿ ಪಕ್ಷದಲ್ಲಿ 2ನೇ ಹಂತದ ನಾಯಕರನ್ನು ತಯಾರು ಮಾಡಲು ಮೋದಿಯವರೇ ಮುಂದಡಿ ಇಡುವುದು ಒಳಿತು.
ಈ ಸಂವತ್ಸರದಲ್ಲಿ ಯಾವುದೇ ಹೊಸ ಉದ್ಯೋಗವಾಗಲಿ, ಕೈಗಾರಿಕೆಯಾಗಲಿ ಸ್ವಾವಲಂಬನೆಯಿಂದ ಉದ್ಯೋಗ ಮಾಡುವ ಯುವಕರಿಗೆ ಪ್ರೋತ್ಸಾಹದ ವಾತಾವರಣ ಕಾಣುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕ್ರೋಧಿನಾಮ ಸಂವತ್ಸರದಲ್ಲಿ ಮೋದಿ ನಾಮ ಉಪಯೋಗಿಸಿ ಹಲವು ಮಂದಿ ತಮ್ಮ ಬಾಳನ್ನು ಬಂಗಾರ ಮಾಡಿಕೊಂಡಿದ್ದಾರೆ. ಇದೆಲ್ಲವೂ ಕ್ರೋಧಿ ಸಂವತ್ಸರದ ಫಲ ಹಾಗೂ ಕುಂಭ ರಾಶಿಯಲ್ಲಿ ಶನಿಯ ಪ್ರವೇಶದ ಸೂಚನೆಯನ್ನು ನೀಡುತ್ತದೆ. ರಾಷ್ಟ್ರದಲ್ಲಿ ಹೆಣ್ಣುಮಕ್ಕಳಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ. ಶೋಷಣೆ, ಲೈಂಗಿಕ ದೌರ್ಜನ್ಯ ಮುಂದುವರಿದಿದೆ. ಯುವಕರಿಗೆ ಉದ್ಯೋಗವೂ ಮರೀಚಿಕೆ ಆಗುತ್ತಿದೆ. ಜನರ ಸಂಕಷ್ಟಕ್ಕೆ ಆಳುವವರು ಸ್ಪಂದಿಸಬೇಕು. ಎಲ್ಲರ ಹೊಟ್ಟೆ, ಬಟ್ಟೆ, ನೆಮ್ಮದಿಗೆ ಮೋದಿಯವರು ಪ್ರಾಮುಖ್ಯತೆ ನೀಡಬೇಕು. ಅನ್ನಾಹಾರ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿರುತ್ತದೆ. ಆಯಾ ಪಕ್ಷಗಳು ಅತಿಯಾದ ಶ್ರಮ ಪಡಬೇಕಾಗುತ್ತದೆ. ಆಳುವ ಪಕ್ಷ ಮಾತಿಗೆ ಕಡಿವಾಣ ಹಾಕಿ ಮೌನದಿಂದ ಕಾರ್ಯ ನಿರ್ವಹಿಸಿದರೆ ಗೆಲುವಿನ ಸಮೀಪಕ್ಕೆ ಬರಬಹುದು. ಆಡಳಿತ ಹಾಗೂ ಪ್ರತಿಪಕ್ಷದ ಯಾರೇ ಗೆದ್ದರೂ, ಪೂರ್ಣ ಬಹುಮತ ಸಿಗುವ ಸಾಧ್ಯತೆ ಕಡಿಮೆ. ಇದರ ಲಾಭವನ್ನು ಪಡೆದುಕೊಳ್ಳಲು ಆಡಳಿತಾರೂಢ ಪಕ್ಷವು ವಾಮಮಾರ್ಗ ಅನುಸರಿಸಬಾರದು. ಎರಡನೇ ಬಾರಿಗೆ ಏಕನಾಥ ಶಿಂಧೆ ಅಧಿಕಾರಕ್ಕೆ ಬರುವ ಸೂಚನೆಗಳು ಪಂಚಾಂಗದಲ್ಲಿ ಕಾಣುತ್ತಿಲ್ಲ. 2014ರಲ್ಲಿ ಆಗಿನ ಮುಖ್ಯಮಂತ್ರಿ ಸುಶೀಲ್ಕುಮಾರ್ ಶಿಂಧೆ ಅವರನ್ನು ಮುಂದುವರಿಸಲು ನಿರ್ಧರಿಸಿದ್ದರೂ, ವಿಲಾಸ್ರಾವ್ ದೇಶ್ವುುಖ್ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರು. ಈ ಘಟನೆಯನ್ನು ಈಗ ನೆನಪಿಸಿಕೊಳ್ಳಬೇಕು. ಆಗಿನ ಸನ್ನಿವೇಶ ಈಗ ಮತ್ತೆ ಪುನರಾವರ್ತನೆಯಾಗುವ ನಿರೀಕ್ಷೆ ಇದೆ. ಅಲ್ಲಿನ ಈಗಿನ ಮಿತ್ರಪಕ್ಷಗಳು ಮೌನಕ್ಕೆ ಶರಣಾಗುವುದರಿಂದ ಒಳಿತು ತರಲಿದ್ದು, ಜನರನ್ನು ಒಲಿಸಿಕೊಳ್ಳುವುದು ಯುಕ್ತ ನಡೆಯಾದೀತು.
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲೂ ಸಮಬಲದ ಹೋರಾಟ ನಡೆಯಲಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲೂ ಚುನಾವಣೆ ನಡೆದಲ್ಲಿ ಈಗಿನ ಸರ್ಕಾರ ಅಧಿಕಾರವನ್ನು ಕಳೆದುಕೊಳ್ಳುತ್ತದೆ. ಕೇರಳದಲ್ಲೂ ಇದೇ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ.
ಮುಂದಿನ ಎರಡು ತಿಂಗಳು ದೇಶಾದ್ಯಂತ ಹೆಚ್ಚು ಮಳೆ ಬೀಳಲಿದೆ. ಆದರೆ, ನಂತರದಲ್ಲಿ ಚಳಿ ಪ್ರಮಾಣ ಏರಲಿದೆ. ಇದರಿಂದ ಕೆಲವು ರೋಗಗಳು ಕಾಣಿಸಿಕೊಳ್ಳಬಹುದು. ಇದನ್ನು ಆಯಾ ಸರ್ಕಾರಗಳು ನಿಗಾ ವಹಿಸಿ ಜನರ ಆರೋಗ್ಯ ಕಾಪಾಡಲು ಆದ್ಯತೆ ನೀಡಬೇಕು. ಜನರಿಗೆ ಆರೋಗ್ಯ ಸಂಬಂಧಿತ ಯೋಜನೆಗಳನ್ನು ಹೆಚ್ಚಾಗಿ ಅನುಷ್ಠಾನಕ್ಕೆ ತಂದಲ್ಲಿ ಅನಾರೋಗ್ಯ ಸ್ಥಿತಿ ಮರುಕಳಿಸದು. ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ನಿಯಮಗಳನ್ನು ಬಿಗಿ ಮಾಡಿದ್ದಲ್ಲಿ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲು ಸಾಧ್ಯ. ಮಕರ ಸಂಕ್ರಾಂತಿಯಿಂದ ದೇಶದೆಲ್ಲೆಡೆ ಬಿಸಿಲಿನ ಝುಳ ಹೆಚ್ಚಾಗಲಿದೆ. ಜ. 14ರಿಂದ ಜು. 14ರವರೆಗೂ ರಣಬಿಸಿಲು ಇರುತ್ತದೆ. ಮುಖ್ಯವಾಗಿ ಮಧ್ಯಭಾರತದಿಂದ ಆರಂಭಗೊಂಡು ಈಶಾನ್ಯ ಭಾರತದವರೆಗೂ ಸಮಸ್ಯೆ ತಂದೊಡ್ಡಲಿದೆ. ಇದರಿಂದ ನೀರಿಗೆ ಹಾಹಾಕಾರ ಏಳಬಹುದು.
ಐವತ್ತು ವರ್ಷ ದೇಶವನ್ನು ಆಳಿದ ಪಕ್ಷಕ್ಕೆ ಹಳಬರು ಮಾತ್ರ ಕಾಣಿಸುತ್ತಾರೆ ಎಂಬ ಆಕ್ಷೇಪ ಜನರ ಮನಸ್ಸಿನಲ್ಲಿದೆ. ಈ ನಿಲುವು ಬದಲಿಸಿಕೊಂಡು ಹೊಸಬರು, ಮಹಿಳೆಯರು, ದೇಶಭಕ್ತರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಪಕ್ಷವನ್ನು ಗಟ್ಟಿ ಮಾಡಿಕೊಳ್ಳಬಹುದು. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಶುದ್ಧೀಕರಿಸಲು ರಾಹುಲ್ ಗಾಂಧಿ ಸ್ವಇಚ್ಛೆಯಿಂದ ಸ್ವತಂತ್ರವಾಗಿ ಪಕ್ಷವನ್ನು ಭವಿಷ್ಯದಲ್ಲಿ ಪುನರ್ ಸಂಘಟಿಸಲು ಗಮನ ಹರಿಸಬೇಕಿದೆ. ‘ನಿಂತಲ್ಲೇ ಇರುವ ನೀರು ಕುಡಿಯಲು ಯೋಗ್ಯವಿರದು’ ಎಂಬ ಮಾತನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕಿದೆ.
ಕರ್ನಾಟಕದಲ್ಲಿ ಪ್ರಜಾಕಲ್ಯಾಣಕ್ಕಿಂತ ಆಡಳಿತಾರೂಢರು ಅಧಿಕಾರದಲ್ಲಿ ಉಳಿದುಕೊಳ್ಳಲು ಹೆಚ್ಚಿನ ಗಮನ ಹರಿಸಿರುವಂತಿದೆ. ಈಗಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕದಲ್ಲಿದ್ದರೂ, ಸದ್ಯಕ್ಕೆ ನಿರಾಳ. ಆದರೂ, ನ. 15ರಿಂದ ಶನಿಯು ಮುಂದೆ ಸಾಗಿ 2025ರ ಮಾ. 29ರವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಆ ಸಮಯದಲ್ಲಿ ಅಧಿಕಾರ ಬಿಟ್ಟುಕೊಡುವ ಪ್ರಸಂಗ ಬರಬಹುದು. ದೈವಬಲ ಇದ್ದರೆ ಮಾತ್ರ ಆಪತ್ತಿನಿಂದ ಪಾರಾಗಬಹುದು.
ರಾಜ್ಯ ಆಳುವವರು ಗ್ಯಾರಂಟಿ ಯೋಜನೆಗಳತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚುವ ಚಾಕಚಕ್ಯತೆಯನ್ನು ಬೆಳೆಸಿಕೊಂಡಲ್ಲಿ ಬೊಕ್ಕಸವನ್ನು ತಹಬಂದಿಗೆ ತರಬಹುದು. ಪ್ರಜಾಕಲ್ಯಾಣವೇ ಮುಖ್ಯವಾಗಬೇಕು. ಬಿಕ್ಕಟ್ಟು ನಿವಾರಣೆಗಾಗಿ ಕರಾವಳಿಯಲ್ಲಿನ ಜನಾರ್ದನನನ್ನು ಪ್ರಾರ್ಥಿಸಿದರೆ ರಾಜ್ಯಕ್ಕೆ ಕಲ್ಯಾಣವಾಗುತ್ತದೆ. ಜತೆಗೆ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆ ಇರದು. ಮಳೆ ಕಾಣದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿ ದವಸ-ಧಾನ್ಯ ವೃದ್ಧಿಸುತ್ತದೆ. ಆದರೂ, ಕರಾವಳಿ ಭಾಗದಲ್ಲಿ ಅಡಕೆ, ಮೆಣಸು, ಗೋಡಂಬಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಅರ್ಥವಾಗದ ಸೋಂಕು ತಗುಲಿ ಬೆಳೆಯ ಇಳುವರಿ ಕಡಿಮೆಯಾಗಬಹುದು. ಇದಕ್ಕಾಗಿ ಕೃಷಿ ತಜ್ಞರ ಸಹಾಯವನ್ನು ಪಡೆಯಬೇಕಾಗುತ್ತದೆ. ಬೆಳಗಾವಿ ಭಾಗದಲ್ಲಿ ಮತ್ತೆ ಭಾಷಾ ಸಮಸ್ಯೆ ಉಂಟಾಗಲಿದೆ. ನೆರೆಯ ರಾಜ್ಯದೊಂದಿಗೆ ಅಪನಂಬಿಕೆಗೆ ಆಸ್ಪದವಾಗುತ್ತದೆ. ನಮ್ಮ ರಾಜ್ಯ ಸರ್ಕಾರ ಗಡಿ ಭಾಗದಲ್ಲಿ ಅಭಿವೃದ್ಧಿ ಕೈಗೊಂಡಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿಗೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಯಾರಿಗೆ ಲಾಭ ಆಗುತ್ತದೋ ಗೊತ್ತಿಲ್ಲ. ಆದರೆ, ಜನರ ಹಿತ ಹಾಗೂ ರಾಜ್ಯದ ಹಿತದೃಷ್ಟಿಯಿಂದ ವರದಿಯನ್ನು ಸದ್ಯಕ್ಕೆ ಜಾರಿ ಮಾಡದಿರುವುದೇ ಒಳಿತು. ಜನರ ಮಧ್ಯೆ ಕಲಹ ಹುಟ್ಟುಹಾಕುವ ಕೆಲಸವನ್ನು ಸರ್ಕಾರ ಮಾಡಬಾರದು. ಬದಲಾಗಿ ಪ್ರಜಾಕಲ್ಯಾಣವೇ ಸರ್ಕಾರದ ಮುಖ್ಯ ಧ್ಯೇಯವಾಗಿದ್ದಲ್ಲಿ ಅಧಿಕಾರದಲ್ಲಿ ಮುಂದುವರಿಯುವ ವಾತಾವರಣ ಸೃಷ್ಟಿಯಾಗುತ್ತದೆ.