Moon Core Facts: ಸುಂದರವಾಗಿ ಕಾಣುವ, ಕವಿಗಳ ಕಾವ್ಯಗಳಿಗೆ ಸದಾ ಸ್ಫೂರ್ತಿ ನೀಡುವ ಆ ತಂಪು ಚಂದ್ರನ ಒಡಲಾಳದಲ್ಲಿ ಅದೆಷ್ಟೋ ನಿಗೂಢ ರಹಸ್ಯಗಳು ಅಡಗಿವೆ. ಮೇಲ್ನೋಟಕ್ಕೆ ತಂಪಾಗಿರುವ ಆ ಶಶಿಯ ಎದೆಯೊಳಗೆ ವಿಜ್ಞಾನಿಗಳನ್ನೂ ಬೆರಗುಗೊಳಿಸುವ ಹಲವು ಅಚ್ಚರಿಯ ಸಂಗತಿಗಳಿವೆ.
ಭೂಮಿಯಿಂದ ನೋಡಿದ್ರೆ ಚಂದ್ರನ ಮೇಲ್ಮೈ ಮಾತ್ರ ಕಣ್ಣಿಗೆ ಕಾಣಿಸುತ್ತೆ, ಆದರೆ ಆ ಚಂದ್ರನ ಎದೆಯಲ್ಲಿ ಒಂದು ವಿಚಿತ್ರ ಹಾಗೂ ರೋಚಕ ಲೋಕವೇ ಅಡಗಿದೆ. ಚಂದಿರನ ಗರ್ಭದಲ್ಲಿ ಏನೇನು ರಹಸ್ಯಗಳಿವೆ ಅಂತ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ನೋಡಿ.
ಚಂದ್ರನ ಮಧ್ಯಭಾಗದಲ್ಲಿ ಅತಿ ಸಣ್ಣದಾದ ಕಬ್ಬಿಣದ ಗರ್ಭವಿದೆ. ಇಲ್ಲಿ ಸುಮಾರು 240 ಕೀ.ಮಿ. ವ್ಯಾಸದ ಗಟ್ಟಿಯಾದ ಕಬ್ಬಿಣದ ಗೋಳವಿದ್ದು, ಇದರ ಸುತ್ತಲೂ ಸುಮಾರು 300 ಕೀ.ಮಿ. ವ್ಯಾಸದ ದ್ರವರೂಪದ ಕಬ್ಬಿಣದ ಪದರ ಇದೆ. ಭೂಮಿಗೆ ಹೋಲಿಸಿದರೆ ಚಂದ್ರನ ಒಳಗೆ ಕಬ್ಬಿಣದ ಪ್ರಮಾಣ ತುಂಬಾ ಕಡಿಮೆ ಇದೆ. ಹಾಗಾಗಿ ಚಂದ್ರನಿಗೆ ಈಗ ಬಲವಾದ ಕಾಂತಕ್ಷೇತ್ರ (Magnetic field) ಇಲ್ಲ. ಆದ್ರೆ, ಶತಕೋಟಿ ವರ್ಷಗಳ ಹಿಂದೆ ಚಂದ್ರನಿಗೂ ಬಲಿಷ್ಠವಾದ ಕಾಂತಕ್ಷೇತ್ರವಿತ್ತು ಅಂತ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಭೂಮಿ ಮೇಲೆ ಭೂಕಂಪ ಆಗೋ ಹಾಗೇ ಚಂದ್ರನ ಒಳಭಾಗದಲ್ಲೂ ಕಂಪನಗಳು ಆಗುತ್ತಿರುತ್ತವೆ. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದಾಗಿ ಮೇಲ್ಮೈನಿಂದ ಬರೋಬ್ಬರಿ 700 ಕೀ.ಮಿ. ಗಿಂತಲೂ ಆಳದಲ್ಲಿ ಈ ಕಂಪನಗಳು ಸೃಷ್ಟಿಯಾಗುತ್ತವೆ. ಭೂಮಿ ಮೇಲಿನ ಕಂಪನಗಳು ಕೆಲವೇ ಸೆಕೆಂಡುಗಳಲ್ಲಿ ನಿಂತೋಗ್ತವೆ, ಆದ್ರೆ ಚಂದ್ರನ ಒಳಭಾಗದಲ್ಲಿ ನೀರಿಲ್ಲದೆ ಸಂಪೂರ್ಣ ಒಣಗಿದ್ದರಿಂದ, ಒಮ್ಮೆ ಅಲ್ಲಿ ಕಂಪನ ಶುರುವಾದರೆ ಸಾಕು ಚಂದ್ರನು ಗಂಟೆಗಟ್ಟಲೆ ಜಾಗಟೆಯ ತರ ರಿಂಗಣಿಸುತ್ತಾ ನಡುಗುತ್ತಲೇ ಇರುತ್ತಾನೆ.
ಚಂದ್ರನ ದಕ್ಷಿಣ ಧ್ರುವದ ಆಳವಾದ ಕುಳಿಗಳಲ್ಲಿ (Craters) ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕೇ ಬಿದ್ದಿಲ್ಲ. ಈ ಶಾಶ್ವತ ಕತ್ತಲೆಯ ಜಾಗಗಳಲ್ಲಿ ಕೋಟ್ಯಂತರ ಟನ್ ನೀರು ಮಂಜುಗಡ್ಡೆ ರೂಪದಲ್ಲಿ ಅಡಗಿ ಕುಳಿತಿದೆ. ಭವಿಷ್ಯದಲ್ಲಿ ಮಾನವ ನಡೆಸುವ ಬಾಹ್ಯಾಕಾಶಯಾನಗಳಿಗೆ ಹಾಗೂ ಸಂಶೋಧನೆಗಳಿಗೆ ಈ ನೀರು ದೊಡ್ಡ ಮಟ್ಟದ ಆಸರೆಯಾಗಲಿದೆ.
ಚಂದ್ರನ ಮೇಲ್ಮೈ ಪದರ (Crust) ಎಲ್ಲ ಕಡೆಯೂ ಒಂದೇ ಸಮನಾಗಿಲ್ಲ. ಭೂಮಿಯಿಂದ ನಮಗೆ ಕಾಣಿಸುವ ಮುಂಭಾಗದ ಪದರ ತೆಳುವಾಗಿದ್ದರೆ, ನಮಗೆ ಎಂದಿಗೂ ಕಾಣಿಸದ ಚಂದ್ರನ ಹಿಂಭಾಗದ (Far side) ಪದರ ತುಂಬಾ ದಪ್ಪಗಿದೆ. ಚಂದ್ರನ ಗರ್ಭದಲ್ಲಿ ಹಿಂದೆ ನಡೆದ ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಮಿಯ ಗುರುತ್ವಾಕರ್ಷಣೆಯ ಸೆಳೆತವೇ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಹೇಳತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕವಿಗಳ ಕಲ್ಪನೆಯ ತಂಪು ಚಂದಿರನ ಒಳಗೆ ಧಗಧಗಿಸೋ ಕರಗಿದ ಕಬ್ಬಿಣದ ಗರ್ಭವಿದೆ. ಆದ್ರೆ ಚಂದ್ರನ ಮೇಲಿನ ರಹಸ್ಯಗಳನ್ನು ಭೇದಿಸುವ ಸಂಶೋಧನೆಗಳು ಇಷ್ಟಕ್ಕೇ ನಿಂತಿಲ್ಲ, ಇಂದಿಗೂ ನಡಿಯುತ್ತಲೇ ಇವೆ.