ಬೆಂಗಳೂರು: ಇತ್ತೀಚೆಗೆ ಅಲ್ಲಲ್ಲಿ ಚಿರತೆಗಳು ಕಂಡು ಬರುತ್ತಿರುವುದು ಹೆಚ್ಚಾಗಿದೆ. ಆದರೆ ಅಪರೂಪದ ಕರಿ ಚಿರತೆಗಳು ಕಂಡು ಬರುವುದು ಬಹಳ ಕಡಿಮೆ.
ಕರಿ ಚಿರತೆಯೊಂದು ರಾತ್ರಿ ಯಾವುದೋ ಗುಡ್ಡಗಾಡು ಪ್ರದೇಶದ ಜನವಸತಿ ಹತ್ತಿರ ನುಗ್ಗಿ ನಾಯಿಯೊಂದನ್ನು ಹೊತ್ತೊಯ್ದಿದೆ. ಕರಿ ಚಿರತೆ ನಾಯಿಯನ್ನು ಭೇಟೆಯಾಡಿ ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸುಧಾ ರಮಣ್ ಎನ್ನುವ ಐಎಫ್ಎಸ್ ಅಧಿಕಾರಿ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಈ ಟ್ವೀಟ್ನ್ನು 34 ಸಾವಿರಕ್ಕೂ ಅಧಿಕ ಮಂದಿ ಕೆಲವೇ ಗಂಟೆಗಳಲ್ಲಿ ವೀಕ್ಷಿಸಿದ್ದಾರೆ. ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ.
ಜನವಸತಿ ಇರುವ ಯಾವುದೋ ಗುಡ್ಡಗಾಡು ಬಳಿ ಚಿರತೆ ಆಹಾರಕ್ಕಾಗಿ ತಡಕಾಡಿದೆ. ಕಡೆಗೆ ಅಲ್ಲಿಯೇ ಮಲಗಿದ್ದ ಬಿಳಿ ಬಣ್ಣದ ನಾಯಿಯನ್ನು ಎಳೆದುಕೊಂಡು ಹೋಗಿದೆ. ಸಾಮಾನ್ಯವಾಗಿ ಕರಿ ಚಿರತೆಗಳು ಕಣ್ಣಿಗೆ ಬಿಳ್ಳುವುದಿಲ್ಲ. ಅದು ಭೇಟೆಯಾಡುವುದನ್ನು ನೋಡುವುದಂತೂ ಸಾಧ್ಯವಿಲ್ಲ. ಇದೀಗ ಈ ಕರಿಚಿರತೆ ಭೇಟೆಯಾಡುವುದನ್ನು ನೋಡುವ ಅವಕಾಶ ಸಿಕ್ಕಿರುವುದು ನೆಟ್ಟಿಗರಿಗೆ ಖುಷಿ ನೀಡಿದೆ.