ನ್ಯೂಸ್

ಶಿವಮೊಗ್ಗದಲ್ಲಿ ಬಿಜೆಪಿ-ಕಾಂಗ್ರೆಸ್​ ಕಾರ್ಯಕರ್ತರ ಗಲಾಟೆ: ಪೊಲೀಸ್​ ವಾಹನಗಳ ಮೇಲೆ ಕಲ್ಲು ತೂರಾಟ

ಶಿವಮೊಗ್ಗ: ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಕಚೇರಿಯಿಂದ ಹೊರ ಬಂದ ಸಚಿವ ಕೆ.ಎಸ್​. ಈಶ್ವರಪ್ಪಗೆ ಮುತ್ತಿಗೆ ಹಾಕಲು ಕಾಂಗ್ರೆಸ್​ ಯುವ ಕಾರ್ಯಕರ್ತರು ಯತ್ನಿಸಿದ್ದು, ಈ ವೇಳೆ ಬಿಜೆಪಿ ಮುಖಂಡರು ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಕಾಂಗ್ರೆಸ್​ನವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆತ ಡೆತ್ ನೋಟ್ ಬರೆದೇ ಇಲ್ಲ. ಆದರೂ ಡೆತ್​ನೋಟ್ ಬರೆದಿದ್ದಾನೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಆತನಿಗೆ ಕಾಮಗಾರಿ ಟೆಂಡರ್ ಆಗಿಯೇ ಇರಲಿಲ್ಲ. ಸಂತೋಷ್ ಪಾಟೀಲ್‌ ಮುಖವನ್ನೇ ನಾನು ನೋಡಿಲ್ಲ. ಕಾಂಗ್ರೆಸ್​ನವರದ್ದು ನಿರಾಧಾರ ಆರೋಪ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಘೋಷಿಸಿ ಈಶ್ವರಪ್ಪ ಹೊರ ಬಂದರು. ಆ ವೇಳೆ ಕಚೇರಿ ಹೊರಗೆ ಜಮಾಯಿಸಿದ್ದ ಕಾಂಗ್ರೆಸ್​ ಕಾರ್ಯಕರ್ತರು ಈಶ್ವರಪ್ಪರನ್ನು ಮುತ್ತಿಗೆ ಹಾಕಲು ಯತ್ನಿಸಿದಾಗ ಪಕ್ಕದಲ್ಲೇ ಇದ್ದ ಬಿಜೆಪಿ ಕಾರ್ಯಕತರು ತಡೆದು ವಾಗ್ವಾದಕ್ಕಿಳಿದರು. ಪೊಲೀಸ್ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದರು.