ನ್ಯೂಸ್

ಮದುವೆ ಮುಹೂರ್ತಕ್ಕೆ ಟೈಂ ಆಯ್ತು... ಹೆದ್ದಾರಿ ಟ್ರಾಫಿಕ್​ನಲ್ಲಿ ಸಿಲುಕಿ ನಡೆದುಕೊಂಡೇ ಹೋದ ಮದುಮಗ

ಚಾಮರಾಜನಗರ: ರಾತ್ರಿ ಸಂಚಾರ ನಿರ್ಬಂಧದಿಂದಾಗಿ ಬೆಂಗಳೂರು-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ದಿಂಬಂ ಘಟ್ಟ ಪ್ರದೇಶದಲ್ಲಿ ಉಂಟಾದ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಮದುಮಗ ಮುಹೂರ್ತಕ್ಕೆ ಸಮಯ ಆಗ್ತಿದೆ ಎಂದು ವಾಹನ ಇಳಿದು ಕಿಲೋ ಮೀಟರ್​ ದೂರ ನಡೆದುಕೊಂಡು ಹೋಗಿದ್ದಾನೆ.

ಕುಟುಂಬಸ್ಥರೊಂದಿಗೆ ಮದುಮಗ ಬಣ್ಣಾರಿ ದೇವಸ್ಥಾನ‌ ತಲುಪಲು ನಡೆದುಕೊಂಡು ಹೋಗುವ ವಿಡಿಯೋವನ್ನು ಲಾರಿ ಚಾಲಕರೊಬ್ಬರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದಿಂಬಂ ಮತ್ತು ಬಣ್ಣಾರಿ ರಸ್ತೆಯಲ್ಲಿ ಗುರುವಾರದಿಂದ ರಾತ್ರಿ ಸಂಚಾರ ನಿರ್ಬಂಧ ಜಾರಿಯಾಗಿದ್ದು ನೂರಾರು ಲಾರಿ, ಗೂಡ್ಸ್ ವಾಹನಗಳು ಒಂದೇ ಬಾರಿಗೆ ಇಂದು ಬೆಳಗ್ಗೆ ಸಂಚಾರ ಆರಂಭಿಸಿದ್ದರಿಂದ ಎರಡು ತಾಸು ವಾಹನಗಳು ನಿಂತಲ್ಲೇ ನಿಂತಿವೆ. ಸುಗಮ ಸಂಚಾರ ಇನ್ನೂ ಆರಂಭವಾಗಿಲ್ಲ ಎಂದು ಲಾರಿ ಚಾಲಕ ನಾಗೇಂದ್ರ ತಿಳಿಸಿದ್ದಾರೆ.