ನ್ಯೂಸ್

ಆಲಮಟ್ಟಿ ಡ್ಯಾಂಗೆ ನುಗ್ಗಲು ಯತ್ನಿಸಿದ ಬುರ್ಕಾಧಾರಿ: ಅನುಮಾನ ಬೆನ್ನೆಟ್ಟಿದಾಗ ಬಯಲಾಯ್ತು ಆ ವ್ಯಕ್ತಿ ಮಹಿಳೆಯಲ್ಲ, ಮಂಗಳಮುಖಿ

ವಿಜಯಪುರ: ಆಲಮಟ್ಟಿ ಜಲಾಶಯದ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಒಳಗೆ ನುಗ್ಗಲು ಯತ್ನಿಸಿದ ಬುರ್ಕಾಧಾರಿಯೊಬ್ಬರನ್ನ ಭದ್ರತಾ ಸಿಬ್ಬಂದಿ ತಡೆದು ವಿಚಾರಣೆ ನಡೆಸಿದಾಗ ಬುರ್ಕಾಧಾರಿ ವ್ಯಕ್ತಿ ಮಹಿಳೆ ಅಲ್ಲ, ಮಂಗಳಮುಖಿ ಎಂಬುದು ಗೊತ್ತಾಗಿದೆ.

ಬುರ್ಕಾಧರಿಸಿದ್ದ ವ್ಯಕ್ತಿಯೊಬ್ಬರು ಸೋಮವಾರ ಬೆಳ್ಳಂಬೆಳಗ್ಗೆ ಜಲಾಶಯದ ಸುತ್ತಮುತ್ತ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದರು. ಅಲ್ಲದೆ ಒಳನುಗ್ಗಲು ಯತ್ನಿಸಿದ್ದಾರೆ. ಕೂಡಲೇ ತಡೆದ ಭದ್ರತಾ ಸಿಬ್ಬಂದಿ, ಇಷ್ಟು ಬೇಗ ಒಳಗಡೆ ಪ್ರವೇಶವಿಲ್ಲ ಎಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಬುರ್ಕಾಧಾರಿ ವ್ಯಕ್ತಿ ಮಹಿಳೆಯಲ್ಲ ಎಂಬುದು ಭದ್ರತಾ ಸಿಬ್ಬಂದಿಗೆ ಗೊತ್ತಾಗಿದೆ. ಅಷ್ಟರಲ್ಲಿ ಸ್ವಲ್ಪ ದೂರ ನಡೆದು ಹೋದ ಆ ವ್ಯಕ್ತಿ ಬುರ್ಕಾ ಕಳಚಿದ್ದು, ಪ್ಯಾಂಟು-ಶರ್ಟ್​ನಲ್ಲಿ ವಾಪಸ್ ಬಂದಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಕೂಲಂಕುಶವಾಗಿ ವಿಚಾರಣೆ ನಡೆಸಲಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದ್ದು, ಆ ವ್ಯಕ್ತಿ ಮಂಗಳಮುಖಿ ಎಂಬುದು ಗೊತ್ತಾಗಿದೆ. ಹೆಸರು ಕಿಶೋರ. ವಿಚಾರಣೆ ವೇಳೆ ತನ್ನೂರು ಮಂಗಳೂರು ಎಂದಿದ್ದಾನೆ. ಮತ್ತೊಮ್ಮೆ ಹಾಸನ ಜಿಲ್ಲೆ ಸಕಲೇಶಪುರ ಅಂತಲೂ ಹೇಳಿದ್ದಾನೆ. ಮನೆಯಲ್ಲಿ ಮದುವೆ ಮಾಡುತ್ತಿರುವ ಕಾರಣ ಜಗಳ ಮಾಡಿಕೊಂಡು ಬಂದಿದ್ದಾಗಿ ಬಾಯ್ಬಿಟ್ಟಿದ್ದಾನೆ. ವಿಚಾರಣೆ ಮುಂದುವರಿದಿದೆ.