ನ್ಯೂಸ್

ಪ್ರಧಾನಿಗೆ ಭದ್ರತೆ ಕಲ್ಪಿಸುವಲ್ಲಿ ಪಂಜಾಬ್​ ಸರ್ಕಾರ ವಿಫಲ: ಬಿಜೆಪಿ ರ‍್ಯಾಲಿ ರದ್ದು, ದೆಹಲಿಗೆ ವಾಪಸ್​ ತೆರಳಿದ ಮೋದಿ

ದೆಹಲಿ: ಪಂಜಾಬ್​ಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ಪಂಜಾಬ್​ ಸರ್ಕಾರ ವಿಫಲವಾಗಿದ್ದು, ಫಿರೋಜ್​ಪುರದಲ್ಲಿ ನಡೆಯಬೇಕಿದ್ದ ಬಿಜೆಪಿ ರ‍್ಯಾಲಿ ರದ್ದಾಗಿದೆ. ಫಿರೋಜ್​ಪುರ ಫ್ಲೈಓವರ್​ನ ಟ್ರಾಫಿಕ್​ನಲ್ಲಿ ಸಿಲುಕಿದ ಪ್ರಧಾನಿ, ಪಂಜಾಬ್​ನಿಂದ ದೆಹಲಿಗೆ ವಾಪಸ್​ ಆಗಿದ್ದಾರೆ.

42,750 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು(ಬುಧವಾರ) ಪಂಜಾಬ್‌ಗೆ ಆಗಮಿಸಿದ್ದರು. ಫಿರೋಜ್‌ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ, ಮಾರ್ಗದಲ್ಲೇ ಟ್ರಾಫಿಕ್​ ಉಂಟಾಗಿತ್ತು. ಅಷ್ಟೇ ಅಲ್ಲ ಪೊಲೀಸ್​ ಭದ್ರತಾ ವೈಫಲ್ಯ ಎದ್ದು ಕಾಣುತ್ತಿತ್ತು. ರ‍್ಯಾಲಿ ತಡೆಯಲು ಉದ್ದೇಶಪೂರ್ವಕವಾಗಿಯೇ ಪಂಜಾಬ್​ ಸರ್ಕಾರ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್​ ಮಾಡಿರುವ ಜೆ.ಪಿ.ನಡ್ಡಾ, ಪಂಜಾಬ್​ನಲ್ಲಿ ಸಾವಿರಾರು ಕೋಟಿಗಳ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ಪ್ರಧಾನಿ ಅವರ ಭೇಟಿಗೆ ಅಡ್ಡಿಪಡಿಸಿರುವುದು ದುಃಖಕರ. ಆದರೆ ಇಂತಹ ಸಂಚಿಗೆ ಹೆದರುವುದಿಲ್ಲ. ಪಂಜಾಬ್‌ ಅನ್ನು ಅಭಿವೃದ್ಧಿ ಮಾಡುತ್ತೇವೆ. ಇಂದು ಆಯೋಜಿಸಿದ್ದ ಬಿಜೆಪಿ ರ‍್ಯಾಲಿಗೆ ಜನರು ಬರದಂತೆ ತಡೆಯಲು ಪೊಲೀಸರಿಗೆ ಪಂಜಾಬ್​ ಸರ್ಕಾರ ಸೂಚನೆ ನೀಡಿತ್ತು. ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಮಾರ್ಗದಲ್ಲಿ ಟ್ರಾಫಿಕ್​ಜಾಮ್​ ಉಂಟಾಗಿತ್ತು. ಇದೆಲ್ಲವೂ ಪೂರ್ವ ನಿಯೋಜಿತ ಎಂದು ಜೆ.ಪಿ. ನಡ್ಡಾ ಆಕ್ರೋಶ ಹೊರ ಹಾಕಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬಳಸಿದ ತಂತ್ರವನ್ನು ಗಮನಿಸಿದರೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರಿಗೂ ನೋವು ತರಿಸುತ್ತದೆ. ಸಮಸ್ಯೆಯನ್ನು ತಿಳಿಗೊಳಿಸುವಂತೆ ಪಂಜಾಬ್​ ಸಿಎಂ ಪೊಲೀಸರಿಗೆ ಕರೆ ಮಾಡಬಹುದಿತ್ತು. ಆದರೆ, ರ‍್ಯಾಲಿ ತಡೆಯುವ ಉದ್ದೇಶ ಅಡಗಿದ್ದರಿಂದ ಪ್ರಯೋಜನವಾಗಲಿಲ್ಲ. ಭದ್ರತಾ ಲೋಪ ಹಿನ್ನೆಲೆ ರ್ಯಾಲಿ ರದ್ದಾಗಿದೆ ಎಂದು ಜೆ.ಪಿ.ನಡ್ಡಾ ಟ್ವೀಟ್​ ಮಾಡಿದ್ದಾರೆ.

ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ, ಫಿರೋಜ್‌ಪುರದಲ್ಲಿ ಪಿಜಿಐ ಸ್ಯಾಟಲೈಟ್ ಸೆಂಟರ್, ಕಪುರ್ತಲಾ ಮತ್ತು ಹೋಶಿಯಾರ್‌ಪುರದಲ್ಲಿ ಎರಡು ಹೊಸ ವೈದ್ಯಕೀಯ ಕಾಲೇಜು ಸೇರದಂತೆ ವಿವಿಧ ಯೋಜನೆಗಳಿಗೆ ಪಿಎಂ ಇಂದು ಚಾಲನೆ ನೀಡಬೇಕಿತ್ತು.