ನ್ಯೂಸ್

ಗ್ರಾಪಂ ಸದಸ್ಯನಿಗೆ ಪಂಚಾಯಿತಿಯಿಂದ ಕೊಟ್ಟ ಗೌರವಧನದ ಚೆಕ್​ ಬೌನ್ಸ್​!

ಚನ್ನಪಟ್ಟಣ: ಲೇವಾದೇವಿ, ಬಡ್ಡಿ ವ್ಯವಹಾರ ಸೇರಿ ಇನ್ನಿತರ ವ್ಯವಹಾರಗಳಲ್ಲಿ ನೀಡುವ ಚೆಕ್​ಗಳು ಬೌನ್ಸ್​ ಆಗುವ ಪ್ರಕರಣಗಳು ಮಾಮೂಲು. ಆದರೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಪಂಚಾಯಿತಿಯಿಂದ ನೀಡುವ ಗೌರವಧನದ ಚೆಕ್​ ಬೌನ್ಸ್​ ಆಗಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಪಂನಿಂದ ವಳೆಗೆರೆದೊಡ್ಡಿ ಗ್ರಾಪಂ ಸದಸ್ಯ ಮನೋಹರ್​ ಎಂಬುವವರಿಗೆ ನೀಡಿದ ಸದಸ್ಯತ್ವದ ಗೌರವಧನದ ಬೌನ್ಸ್​ ಆಗಿದ್ದು, ಬ್ಯಾಂಕ್​ಗೆ ಹಣ ಡ್ರಾ ಮಾಡಲು ಹೋಗಿದ್ದ ಮನೋಹರ್​ ಮುಜುಗರಕ್ಕೀಡಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಇಒಗೆ ದೂರು ನೀಡಿದ್ದಾರೆ.

ಸರ್ಕಾರದಿಂದ ಗ್ರಾಪಂ ಸದಸ್ಯರಿಗೆ ತಿಂಗಳಿಗೆ 3 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಈ ಹಿಂದೆ ರ್ನಿದಿಷ್ಟ ಅನುದಾನದಲ್ಲಿ ಗೌರವಧನ ನೀಡುವ ವ್ಯವಸ್ಥೆ ಇತ್ತು. ತದನಂತರ, ಗೌರವಧನಕ್ಕೆಂದೇ ಪ್ರತ್ಯೇಕವಾಗಿ ಸರ್ಕಾರ ಅನುದಾನ ನೀಡುತ್ತಿದೆ. ಅದರಂತೆ ಈ ಸದಸ್ಯನಿಗೆ ಗ್ರಾಪಂ ಅಧಿಕಾರಿಗಳು ಚೆಕ್​ ನೀಡಿದ್ದಾರೆ. ಸದಸ್ಯ ಹಣ ತೆಗೆದುಕೊಳ್ಳಲು ಚೆಕ್​ ಅನ್ನು ತಮ್ಮ ಬ್ಯಾಂಕ್​ ಖಾತೆಗೆ ಹಾಕಿದ್ದಾರೆ. ಆದರೆ, ಗ್ರಾಪಂ ಖಾತೆಯಲ್ಲಿ ಹಣ ಇಲ್ಲದೆ ಚೆಕ್​ ಬೌನ್ಸ್​ ಆಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸದಸ್ಯ ಮನೋಹರ್​ ಗ್ರಾಪಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಪಂ ಸದಸ್ಯ, ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕ್ರಮಕ್ಕೆ ಆಗ್ರಹಿಸಿ ಜಿಪಂ ಸಿಇಒಗೆ ದೂರು ನೀಡಿದ್ದಾರೆ.