ಹಾಸನ: ಕುಡಿಯಬೇಕು ಅಂತ ಯಾರೂ ಕುಡಿಯೋದಿಲ್ಲ. ಕೆಲವೊಮ್ಮೆ ಜೀವನದಲ್ಲಿ ನೋವು ಬರುತ್ತೆ. ಅದನ್ನು ಮರೆಯಲು ಒಂದು ಕ್ವಾರ್ಟರ್ ಹಾಕ್ಲೇಬೇಕಾಗುತ್ತೆ. ಕುಡುಕರು ಪಾಪ ನೋವು ಮರೆಯೋಕೆ ಕುಡೀತಾರೆ.. ಬಡ್ಡಿ ಸಾಲ ಮಾಡಿರ್ತಾರೆ, ಸಾಲ ಕೊಟ್ಟವರು ಮನೆ ಬಳಿ ಬಂದು ಕೂತ್ಕೋತಾರೆ. ಅವರಿಗೆ ದುಡ್ಡು ಕೊಡೋಕೆ ಆಗಲ್ಲ. ಆಗ ನಮ ಜನ ಕ್ವಾಟ್ರು ಕುಡಿದು ಮಲ್ಕೋಬೇಕೋ ಅಥವಾ ವಿಷ ತಗಬೇಕೋ ಸ್ವಾಮಿ?
ಇದು ಹಾಸನ ಡೇರಿ ಆವರಣದಲ್ಲಿ ಭಾನುವಾರ ನಡೆದ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾರಿಸಿದ ನಗೆ ಬಾಂಬ್. ನಂಗೂ ಒಂದು ನೋವಿದೆ ಎಂದು ಇದೇ ವೇಳೆ ರೇವಣ್ಣ ಹೇಳಿದರು.
ಹಾಸನದ ಈ ಸರ್ಕಲ್ನಿಂದ ಬೇಲೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೋಗಿ ನೋಡಿ ಸ್ವಾಮೀ... 40 ಬಾರ್ ಸಿಗುತ್ವೆ, ಅವುಗಳಿಗೆ ಅನುಮತಿ ನೀಡಿ ನಮ್ಮ ಬಿಜೆಪಿ ಸರ್ಕಾರ ದೊಡ್ಡ ಸಾಧನೆ ಮಾಡ್ಬಿಟ್ಟಿದೆ. ಪಾಪ ಹೆಣ್ಮಕ್ಳು ಬಂದು ಅಳ್ತವೆ. ಕುಮಾರಸ್ವಾಮಿ ಇದ್ದಾಗ ಹೆಣ್ಮಕ್ಳು, ಅಣ್ಣಾ ಶರಾಬು ನಿಲ್ಲಿಸ್ಬುಡಿ ಅಂದ್ರು. ಕುಮಾರಸ್ವಾಮಿ ಪಾಪ ಅಂತ ನಿಲ್ಲುಸ್ಬುಟ್ರು. ಈಗ ಎಣ್ಣೆ ಬೆಲೆ ನಾಲ್ಕು ಪಟ್ಟು ಏರಿಕೆ ಆಗಿರೋದ್ರಿಂದ ನಮ್ ಗಂಡು ಮಕ್ಳು, ಕುಮಾರಣ್ಣ ಈ ಹೆಣ್ಮಕ್ಳು ಮಾತು ಕೇಳಿ ನಮ್ಮನ್ನ ಹಾಳು ಮಾಡ್ಬಿಟ್ಟ... 10ಕ್ಕೆ ಸಿಗ್ತಿದ್ದ ಕ್ವಾಟ್ರು ಈಗ 60 ರೂ. ಆಗಿದೆ ಅಂತಿದ್ದಾರೆ. ಏನ್ ಮಾಡೋದಪ್ಪಾ ಎಂದು ನಗೆ ಚಟಾಕಿ ಹಾರಿಸಿದರು.