Cake : ಕೇಕ್ ಅನ್ನು ಇಷ್ಟಪಡದವರು ಯಾರೂ ಇಲ್ಲ. ಆದರೆ, ಕೇಕ್‌ನ ಅವಧಿ ಒಂದು ದಿನ ಮಾತ್ರ. ಫ್ರಿಡ್ಜ್ನಲ್ಲಿ ಇಟ್ಟರೆ ಒಂದೆರೆಡು ದಿನ ಹೆಚ್ಚಿಗೆ ಇಡಬಹುದಷ್ಟೇ. ಆ ಬಳಿಕ ತಿನ್ನಲು ಆಗುವುದಿಲ್ಲ. ಆದರೆ, 77 ವರ್ಷದ ಕೇಕ್ ತುಣುಕೊಂದು ಬರೋಬ್ಬರಿ ಎರಡು ಲಕ್ಷ ರೂಪಾಯಿಗೆ ಮಾರಾಟವಾಗಿದೆ ಅಂದರೆ ನೀವು ನಂಬುತ್ತೀರಾ? ಇದನ್ನು ಕೇಳಿ ಒಂದು ಕ್ಷಣ ನಿಮ್ಮ ಹುಬ್ಬೇರಿದರೂ ಆಶ್ಚರ್ಯವಿಲ್ಲ.
ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಫಿಲಿಪ್ ಅವರ ರಾಜಮನೆತನದ ವಿವಾಹದಲ್ಲಿ ಬಡಿಸಿದ ಕೇಕ್ ತುಂಡು 2,200 ಪೌಂಡ್ (2,41,090 ರೂಪಾಯಿ) ಗೆ ಹರಾಜಾಗಿದೆ. ಸುಮಾರು 77 ವರ್ಷ ಹಳೆಯದಾದ ಕೇಕ್ ತುಂಡು ವಾಸ್ತವವಾಗಿ ನಾಲ್ಕು ಪದರದ ಹಣ್ಣಿನ ಕೇಕ್‌ನ ಒಂದು ಭಾಗವಾಗಿದೆ. ಈ ಕೇಕ್ ಒಂಬತ್ತು ಅಡಿ ಎತ್ತರ ಮತ್ತು 226 ಕೆಜಿ ತೂಕವಿತ್ತು. ಇದನ್ನು 2,000 ಅತಿಥಿಗಳಿಗಾಗಿ ತಯಾರಿಸಲಾಗಿತ್ತು. ಮದುವೆಗಾಗಿ ಬಕಿಂಗ್ಹ್ಯಾಮ್ ಅರಮನೆಯಲ್ಲಿ ತಯಾರಿಸಲಾದ ಒಟ್ಟು 12 ವಿವಾಹದ ಕೇಕ್ಗಳಲ್ಲಿ ಇದು ಅತ್ಯಂತ ಪ್ರಮುಖವಾಗಿತ್ತು. ಎಲಿಜಬೆತ್ ಅವರು 1947, ನವೆಂಬರ್ 20ರಂದು ವಿವಾಹವಾದರು.
ಸ್ಕಾಟ್ಲೆಂಡ್‌ನಲ್ಲಿರುವ ಬ್ರಿಟನ್‌ನ ಅಧಿಕೃತ ನಿವಾಸ ಹೋಲಿರೂಡ್ ಹೌಸ್ ಪ್ಯಾಲೇಸ್‌ನ ಮಾತೃಪ್ರಧಾನರಾಗಿದ್ದ ಮರಿಯನ್ ಪಾಲ್ಸನ್ ಅವರಿಗೆ ನೀಡಲಾಗಿದ್ದ ಕೇಕ್ ಇದೀಗ ಹರಾಜಾಗಿದೆ. ಮರಿಯನ್ ಅವರು 1980ರ ದಶಕದಲ್ಲಿ ಸಾಯುವವರೆಗೂ ಈ ಕೇಕ್ ಅನ್ನು ಸುರಕ್ಷಿತವಾಗಿರಿಸಿದರು. ಐಷಾರಾಮಿ ಪೆಟ್ಟಿಗೆಯೊಳಗೆ ಕೇಕ್ ಪೀಸ್ ಅನ್ನು ಇಟ್ಟು ಹಾಸಿಗೆಯ ಕೆಳಗೆ ಸೂಟ್ಕೇಸ್ನಲ್ಲಿ ಇರಿಸಲಾಗಿತ್ತು. ಅದರೊಂದಿಗೆ ಎಲಿಜಬೆತ್ ಪತ್ರವೂ ಇತ್ತು.
ಮರಿಯನ್ ಕುಟುಂಬವು ಈ ವರ್ಷದ ಆರಂಭದಲ್ಲಿ ಕೇಕ್ ಅನ್ನು ಹರಾಜು ಮಾಡಲು ನಿರ್ಧರಿಸಿತು. ಕೇಕ್ ಪೀಸ್ ಮೂಲತಃ 500 ಪೌಂಡ್ ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಚೀನಾದಿಂದ ಫೋನ್ ಮೂಲಕ ಸಂಪರ್ಕಿಸಿದ ವ್ಯಕ್ತಿಯೊಬ್ಬ 2,200 ಪೌಂಡ್ (2,41,090 ರೂಪಾಯಿ) ಗೆ ಕೇಕ್ ತುಂಡನ್ನು ಪಡೆದುಕೊಂಡಿದ್ದಾನೆ.
ಅಂದಹಾಗೆ ಎಲಿಜಬೆತ್ ಅವರ ಮಗ ಕಿಂಗ್ ಚಾರ್ಲ್ಸ್ III ಮತ್ತು ರಾಜಕುಮಾರಿ ಡಯಾನಾ ಅವರ ವಿವಾಹದ ಕೇಕ್ ತುಂಡು 2022 ರಲ್ಲಿ 170 ಪೌಂಡ್ (15,864 ರೂಪಾಯಿ) ಗೆ ಹರಾಜಾಯಿತು. ಇದು ಐದು ಅಡಿ ಉದ್ದದ ಮತ್ತು ಐದು ಪದರಗಳನ್ನು ಹೊಂದಿರುವ ದೈತ್ಯ ಹಣ್ಣಿನ ಕೇಕ್ ಆಗಿತ್ತು. 2014ರಲ್ಲಿ ಇದೇ ಹಣ್ಣಿನ ಕೇಕ್ ತುಂಡು 990 ಪೌಂಡ್‌ಗಳಿಗೆ (91,772 ರೂಪಾಯಿ) ಮಾರಾಟವಾಗಿತ್ತು. (ಏಜೆನ್ಸೀಸ್)