ನ್ಯೂಸ್

ಸಿಂಹಗಳೇ ತುಂಬಿರುವ ಕಾಡಿನಲ್ಲಿ ಕಳೆದುಹೋದ ಬಾಲಕ: ಕೊನೆಗೆ ನಡೆಯಿತೊಂದು ಮಹಾ ಪವಾಡ! Zimbabwe Forest

Zimbabwe Forest : ಕಾಡುಪ್ರಾಣಿಗಳು ವಾಸಿಸುವ ದಟ್ಟ ಕಾಡಿನಲ್ಲಿ ಕಳೆದು ಹೋದ ಏಳು ವರ್ಷದ ಬಾಲಕನೊಬ್ಬ ಹೇಗೆ ಹೊರಬರಬೇಕೆಂದು ತಿಳಿಯದೆ ಐದು ದಿನಗಳ ಕಾಲ ಕಾಡಿನಲ್ಲೇ ಸಿಲುಕಿಕೊಂಡ ಘಟನೆ ಉತ್ತರ ಜಿಂಬಾಬ್ವೆಯ ಮಳೆಕಾಡು ಮೀಸಲು ಪ್ರದೇಶದಲ್ಲಿ ನಡೆದಿದೆ.

ಈ ಅರಣ್ಯವು ಸಿಂಹಗಳು ಮತ್ತು ಆನೆಗಳಿಗೆ ನೆಲೆಯಾಗಿದೆ. ಐದು ದಿನಗಳ ಕಾಲ ಹಣ್ಣು ತಿಂದು, ಸಣ್ಣ ಹಳ್ಳಗಳಲ್ಲಿ ತುಂಬಿದ್ದ ನೀರು ಕುಡಿದು ಬಾಲಕ ಬದುಕಿದ್ದ. ಆ ಬಾಲಕನ ಹೆಸರು ಟಿನೊಟೆಂಡಾ. ಈತ ಡಿಸೆಂಬರ್ 27ರಂದು ಉತ್ತರ ಜಿಂಬಾಬ್ವೆಯ ತನ್ನ ಹಳ್ಳಿಯಿಂದ ನಾಪತ್ತೆಯಾಗಿದ್ದನು.

ಬಾಲಕನ ಪಾಲಕರು ನೀಡಿದ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಹುಡುಕಾಟ ಆರಂಭಿಸಿದರು. ಸುಮಾರು ಐದು ದಿನಗಳ ನಂತರ ಗ್ರಾಮದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಮಾಟುಸಡೋನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ ಬಾಲಕನನ್ನು ಅರಣ್ಯಾಧಿಕಾರಿಗಳು ಕಂಡುಕೊಂಡರು. ಆ ಸಮಯದಲ್ಲಿ ಬಾಲಕ ತುಂಬಾ ನಿತ್ರಾಣಗೊಂಡಿದ್ದನು. ಕೊನೆಗೆ ಆತನನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು.

ಅಪಾಯಕಾರಿಯಾದ ಮಾಟುಸಡೋನ್ಹಾ ಗೇಮ್ ಪಾರ್ಕ್​ನಲ್ಲಿ ಬಾಲಕ ತನಗೆ ಅರಿವಿಲ್ಲದೆ ಅಲೆದಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘರ್ಜಿಸುವ ಸಿಂಹಗಳು ಮತ್ತು ಆನೆಗಳ ನಡುವೆ ತನ್ನ ಸಮಯವನ್ನು ಏಕಾಂಗಿಯಾಗಿ ಕಳೆದಿದ್ದಾನೆ.

ಮಾಟುಸಡೋನಾ ಗೇಮ್ ಪಾರ್ಕ್‌ನಲ್ಲಿ ಸುಮಾರು 40 ಸಿಂಹಗಳಿವೆ. ಐದು ದಿನಗಳ ಕಾಲ ಕಾಡಿನಲ್ಲಿ ಬಾಲಕ ಬದುಕಿದ್ದು ಹೇಗೆ ಎಂದು ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಇದೊಂದು ಪವಾಡ ಎಂದು ಸ್ಥಳೀಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)