ನ್ಯೂಸ್

ಜನಾಂಗೀಯ ದಾಳಿಗೆ ಬಲಿಯಾದ ಭಾರತ ಮೂಲದ 6 ವರ್ಷದ ಬಾಲಕಿ! Racist Attack

Racist Attack: ಐರ್ಲೆಂಡ್‌​ನಲ್ಲಿ ಹೆಚ್ಚುತ್ತಿರುವ ಜನಾಂಗೀಯ ದಾಳಿಗೆ ಭಾರತೀಯ ಮೂಲದ 6 ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬಾಲಕಿ ನಿಯಾ ನವೀನ್​ ಕೇರಳ ಮೂಲದ ಕೊಟ್ಯಾಯಮ್​ ನಿವಾಸಿ ಎಂದು ತಿಳಿದುಬಂದಿದೆ. ಈಕೆ ಮನೆಯಂಗಳದಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ 12-14 ವರ್ಷದ ಮಕ್ಕಳ ಗುಂಪೊಂದು ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿ, "ಕೊಳಕು" ಎಂದು ಕರೆದು "ಭಾರತಕ್ಕೆ ಹಿಂತಿರುಗಿ" ಎಂದು ಎಚ್ಚರಿಕೆ ನಡಿದ್ದಾರೆ.

ಘಟನೆ ಏನು?

ನಿಯಾ ಆಡುತ್ತಿರುವ ವೇಳೆ ಹುಡುಗರ ಗುಂಪೊಂದು ಹಲ್ಲೆ ನಡೆಸಿದ್ದು, ಆಕೆಯ ಕುತ್ತಿಗೆಗೆ ಗುದ್ದಿದ್ದಾರೆ, ಕೂದಲುಗಳನ್ನು ಎಳೆದಾಡಿದ್ದಾರೆ. ಇನ್ನು ಸೈಕಲ್​ನಲ್ಲಿ ಖಾಸಗಿ ಭಾಗಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ಆಕೆಯ ತಾಯಿ ಅನುಪ ಅಚ್ಯುತನ್ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.

ನರ್ಸ್​ ಆಗಿರುವ ಅಚ್ಯುತನ್​ ಕಳೆದ 8 ವರ್ಷಗಳಿಂದ ಐರ್ಲೆಂಡ್​ನಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾರೆ. ಅವರ 2 ಮಕ್ಕಳು ಅಲ್ಲಿಯೇ ಜನಿಸಿದ್ದಾರೆ. ಇವರು ಐರಿಷ್​ ದೇಶದ ನಾಗರೀಕ ಹಕ್ಕನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಅಚ್ಯುತನ್​ ಕೊಟ್ಟ ದೂರು ಏನು?

ಸಂಜೆ ಸುಮಾರು 7.30 ಆಗಿತ್ತು, ನಿಯಾ ಮನೆಯೊಳಗೆ ಆಟವಾಡುತ್ತಿದ್ದಳು. ಅವಳು ಹೊರಗೆ ಆಟವಾಡಲು ಬಯಸಿದ್ದರಿಂದ ಆಕೆಯನ್ನು ಸ್ವಲ್ಪ ಸಮಯ ಹೊರಗೆ ಕಳುಹಿಸಿದೆ. ನನ್ನ ಪತಿ ಕೆಲಸಕ್ಕೆ ಹೋಗಿದ್ದರು, ನನ್ನ 10 ತಿಂಗಳ ಮಗುವಿನ ಜೊತೆ ನಾನು ಒಳಗೆ ಇದ್ದೆ, ಅಷ್ಟರಲ್ಲೇ ನಿಯಾ ಅಳಲು ಆರಂಭಿಸಿದಳು, ತುಂಬಾ ಭಯಭೀತಳಾಗಿದ್ದಳು. ಆ ಹುಡುಗರು ಆಕೆಗೆ ಸರಿಯಾಗಿ ಹೊಡೆದಿದ್ದರಿಂದ ಆಘಾತಗೊಂಡಿದ್ದಳು. ಆದರಿಂದ, ಆಕೆಯ ಸ್ನೇಹಿತರಲ್ಲಿ ಕೇಳಿದಾಗ ಅವರು ಆದ ಘಟನೆಯನ್ನು ವಿವರಿಸಿದರು ಎಂದು ಆಕೆಯ ತಾಯಿ ಐರಿಸ್​ ಪೊಲೀಸರ ಮಾಹಿತಿ ನೀಡಿದ್ದಾರೆ.

ಅಚ್ಯುತನ್ ಆ ಹುಡುಗರ ವಿರುದ್ಧ ಕೇಸು ದಾಖಲಿಸಲು ಹಿಂಜರಿದಿದ್ದು, ಆ ಮಕ್ಕಳಿಗೆ ಬೇಕಾಗಿರುವುದು ಕೌನ್ಸೆಲಿಂಗ್​ ,ಅವರಿಗೆ ಶಿಕ್ಷೆ ನೀಡದೆ, ಇತರ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂದು ತಿಳಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)