| ನವೀನ್ ಬಿಲ್ಗುಣಿ ಶಿವಮೊಗ್ಗ
ಹೊಸ ಆಲೋಚನೆ, ಅಂದ-ಚೆಂದಕ್ಕಾಗಿ, ವಾಸ್ತು ಸಲಹೆ ಮುಂತಾದ ಕಾರಣಕ್ಕೆ ಮನೆಗಳ ನವೀಕರಣ ನಡೆಯುತ್ತಲೇ ಇರುತ್ತವೆ. ಇನ್ನು ಕೆಲವರು ಹಳೇ ಮನೆಯ ಜಂಜಾಟವೇ ಸಾಕೆಂದು ಹೊಸ ಮನೆ ಕಟ್ಟಿಸುತ್ತಾರೆ ಇಲ್ಲವೇ ಖರೀದಿಸಿಬಿಡುತ್ತಾರೆ. ಆದರೆ ಇಲ್ಲೊಬ್ಬರು ಇಡೀ ಮನೆಯನ್ನೇ ಬರೋಬ್ಬರಿ ಆರಡಿ ಮೇಲೆಕ್ಕೇರಿಸುವ ಸಾಹಸದ ಕಾರ್ಯ ಮಾಡಿಸುತ್ತಿದ್ದಾರೆ.
ಹೌದು, ಇದು ನಗರದ ಪಿ ಆ್ಯಂಡ್ ಟಿ ಕಾಲನಿ ಒಂದನೇ ತಿರುವಿನಲ್ಲಿರುವ ಐಟಿಐ ನಿವೃತ್ತ ಸಹಾಯಕ ನಿರ್ದೇಶಕ ಕೆ.ಜಿ.ಶ್ರೀನಿವಾಸಮೂರ್ತಿ ಅವರ ಕನಸಿನ ಮನೆಯ ಕತೆ. ಅಂದುಕೊಂಡಂತೆ ನಡೆದರೆ ಇನ್ನು ಹತ್ತೇ ದಿನಗಳಲ್ಲಿ 50*30 ಚದರಡಿಯ ಡುಪ್ಲೆಕ್ಸ್ ಮನೆ ಸದ್ದಿಲ್ಲದೆ ಆರಡಿ ಮೇಲಕ್ಕೆದ್ದು ಪ್ರತಿಷ್ಠಾಪನೆಗೊಳ್ಳಲಿದೆ.
ಬಿಹಾರದ ನುರಿತ 9 ಕಾಮಿರ್ಕರು ನೆಲಮಟ್ಟದಿಂದ ನಾಲ್ಕು ಅಡಿ ಆಳದಲ್ಲಿದ್ದ ದೊಡ್ಡ ಮನೆಯನ್ನು ತಳಪಾಯ ಸಹಿತ ಐದು ಅಡಿಯಷ್ಟು ಮೇಲೆತ್ತಿದ್ದಾರೆ. ಇನ್ನೊಂದು ಅಡಿ ಎತ್ತಿ ಅಡಿಪಾಯ ಭದ್ರಪಡಿಸಿಬಿಟ್ಟರೆ ಅಕ್ಕಪಕ್ಕಕ್ಕಿಂತ ಈ ಮನೆ ಆರು ಅಡಿ ಎತ್ತರದಲ್ಲಿ ವಿರಾಜಮಾನವಾಗಲಿದೆ. ಇಂಥ ಅಪರೂಪದ ಕಾರ್ಯಾಚರಣೆಗೆ ಶಿವಮೊಗ್ಗ ಸಾಕ್ಷಿಯಾಗಿದೆ.
ಯಂತ್ರಗಳ ಬಳಕೆಯೇ ಇಲ್ಲ: ಕೇರಳ, ಹೈದ್ರಾಬಾದ್, ವಿಶಾಖಪಟ್ಟಣ, ರಾಜ್ಯದ ಬೆಂಗಳೂರು, ಮೈಸೂರು ಸೇರಿ ಹಲವೆಡೆ ಮನೆ ಮೇಲೇರಿಸುವ ಮತ್ತು ಸ್ಥಳಾಂತರ ಕಾರ್ಯವನ್ನು ಬಿಹಾರದ ಈ 9 ಕಾಮಿರ್ಕರ ತಂಡ ಮಾಡಿದೆ. ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಮನೆಯನ್ನು ಮೇಲಕ್ಕೆ ಎತ್ತಲಾಗುತ್ತಿದೆ. ಇದಕ್ಕಾಗಿ 150 ಜಾಕ್ಗಳನ್ನು ಬಳಕೆ ಮಾಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಕೇವಲ 35 ದಿನಗಳಲ್ಲಿ ನಾವೀನ್ಯತೆ, ಶ್ರಮ, ತಾಂತ್ರಿಕ ಕೌಶಲದ ಕಾರ್ಯಾಚರಣೆಯಿಂದ ಮನೆ ಮೇಲೇಳುತ್ತಿದೆ.
ಆನ್ಲೈನ್ನಲ್ಲಿ ಹುಡುಕಾಟ: ರಾಜ್ಯ-ಹೊರರಾಜ್ಯದಲ್ಲಿ ಮನೆ ಸ್ಥಳಾಂತರ ಮಾಡಿಸಿರುವ ಬಗ್ಗೆ ತಿಳಿದುಕೊಂಡಿದ್ದ ಮತ್ತು ಮೂಲತಃ ಮೆಕಾನಿಕಲ್ ಇಂಜಿನಿಯರ್ ಆಗಿರುವ ಶ್ರೀನಿವಾಸಮೂರ್ತಿ ಕೇರಳದ ಹೌಸ್ ಲಿಫ್ಟಿಂಗ್ ಸರ್ವೀಸ್ ಇನ್ ಏಷ್ಯಾ ಸಂಸ್ಥೆಯನ್ನು ಆನ್ಲೈನ್ ಮೂಲಕ ಸಂಪರ್ಕ ಮಾಡಿದ್ದರು. ಬೆಂಗಳೂರಿನಲ್ಲಿ ಮನೆಯೊಂದನ್ನು ತಳಮಟ್ಟದಿಂದ ಶಿಫ್ಟ್ ಮಾಡಿರುವುದನ್ನು ಸ್ವತಃ ಖುದ್ದು ಭೇಟಿ ನೀಡಿ ಪರಿಶೀಲಿಸಿ ವಾಸ್ತವ ಅರಿತ ನಂತರ ಕಾಮಿರ್ಕರನ್ನು ಶಿವಮೊಗ್ಗಕ್ಕೆ ಕರೆತಂದಿದ್ದಾರೆ.
ಮಳೆ ನೀರು, ಯುಜಿಡಿಯಿಂದ ಆತಂಕ: ಶ್ರೀನಿವಾಸಮೂರ್ತಿ ಅವರು 2011ರಲ್ಲಿ 25 ಲಕ್ಷ ರೂ.ಗೆ ಮನೆ ಖರೀದಿಸಿದ್ದು ಪತ್ನಿ, ಪುತ್ರ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಕಾಲನಿ ಹೊಸದಾಗಿ ಅಭಿವೃದ್ಧಿ ಹೊಂದುತ್ತಿರುವ ಕಾರಣ ಯುಜಿಡಿ ವ್ಯವಸ್ಥೆ ಇನ್ನೂ ಆಗಿಲ್ಲ. ರಸ್ತೆಯಿಂದ ನಾಲ್ಕೈದು ಅಡಿ ಕೆಳಮಟ್ಟದಲ್ಲಿ ಮನೆ ಇರುವುದರಿಂದ ಮಳೆಗಾಲದಲ್ಲಿ ನೀರು ಮನೆಗೆ ನುಗ್ಗುವ ಸಂಭವ ಹೆಚ್ಚಿತ್ತು. ಮುಂದೆ ಯುಜಿಡಿ ಸಂಪರ್ಕ ಕಲ್ಪಿಸಿದರೆ ಆ ನೀರು ಮನೆಯೊಳಗೇ ನುಗ್ಗುವ ಆತಂಕವೂ ಇತ್ತು. ಇವೆಲ್ಲದಕ್ಕೂ ಮನೆ ಮೇಲೆತ್ತುವುದೇ ಪರಿಹಾರ ಎಂದುಕೊಂಡರು ಶ್ರೀನಿವಾಸಮೂರ್ತಿ.
ಈ ಮನೆಯಲ್ಲೇ ಕಾರ್ಮಿಕರ ವಾಸ: ಇದುವರೆಗೆ ಮನೆಯನ್ನು ಐದಡಿ ಎತ್ತಿದರೂ ಗೋಡೆಯಲ್ಲಿ ಸಣ್ಣದೊಂದು ಬಿರುಕು ಕೂಡ ಬಿಟ್ಟಿಲ್ಲ. ಒಳಾಂಗಣದಲ್ಲೂ ಲೋಪವಾಗದಂತೆ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅನಾಹುತಕ್ಕೆ ಆಸ್ಪದವಿಲ್ಲದಂತೆ ಕಾಮಗಾರಿ ನಡೆಯುತ್ತಿದೆ. ನಿಗದಿತ ಅವಧಿಯಲ್ಲಿ ಮನೆ ಎತ್ತರಿಸುವ ಕಾರ್ಯ ಮುಗಿಯಲಿದೆ. ವಿಶೇಷವೆಂದರೆ 9 ಕಾರ್ಮಿಕರೂ ಅದೇ ಮನೆಯ ಮೇಲಂತಸ್ತಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಡುಗೆ, ಊಟ, ಸ್ನಾನ, ನಿದ್ರೆ ಎಲ್ಲವೂ ಅಲ್ಲೇ!
ಕಾರ್ಯಾಚರಣೆ ಹೇಗೆ?: ಯಂತ್ರಗಳ ಸಹಾಯವಿಲ್ಲದೆ ಮನೆಯ ತಳಪಾಯ ಜಾಗವನ್ನು ವ್ಯವಸ್ಥಿತವಾಗಿ ಬಿಡಿಸಿಕೊಳ್ಳುತ್ತಾರೆ. ನಂತರ ಸುತ್ತ ಕಿಂಡಿಗಳನ್ನು ಕೊರೆದು ಭೂಮಿ ಮತ್ತು ಮನೆ ಆಳದ ಲಿಂಟಲ್ ಭಾಗವನ್ನು ಬಿಡಿಸಿಕೊಳ್ಳುತ್ತಾರೆ. ಸುತ್ತಲೂ 150 ಜಾಕ್ ಕೊಟ್ಟು ಹಂತ ಹಂತವಾಗಿ 45 ಡಿಗ್ರಿಯಲ್ಲಿ ಜಾಕ್ ಮೂಲಕ ಇಡೀ ಮನೆ ಮೇಲೆತ್ತುವುದನ್ನು ಚುರುಕುಗೊಳಿಸುತ್ತಾರೆ. ಫೌಂಡೇಷನ್ ಹಾಗೂ ಪಿಲ್ಲರ್ಗಳನ್ನು ಮೇಲೆತ್ತಿ ಕೂಡಿಸಿಕೊಳ್ಳುವರು. ಹೀಗೆ ಅತ್ಯಂತ ಚಾಣಾಕ್ಷತನದಿಂದ ಕೆಲಸ ಮಾಡುತ್ತಾರೆ. ವಿಷಯ ತಿಳಿದ ಹತ್ತಾರು ಜನರು ನಿತ್ಯವೂ ಸ್ಥಳಕ್ಕೆ ಬಂದು ವೀಕ್ಷಿಸುತ್ತಿದ್ದಾರೆ. ಮತ್ತೆ ಕೆಲವರು ಮನೆ ಮಾಲೀಕರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ.
ಮೂರು ವರ್ಷದ ಹಿಂದೆಯೇ ಈ ಯೋಜನೆ ಹಾಕಿಕೊಂಡಿದ್ದೆವು. ಆದರೆ ಕರೊನಾ ಸೇರಿ ಹಲವು ಕಾರಣಗಳಿಂದ ವಿಳಂಬವಾಯಿತು. ಈ ಬಾರಿ ಇಡೀ ಡುಪ್ಲೆಕ್ಸ್ ಮನೆಯನ್ನು 6 ಅಡಿ ಎತ್ತರಕ್ಕೇರಿಸಲಾಗುತ್ತಿದೆ. ಬಿಹಾರದ 9 ಕಾರ್ಮಿಕರ ತಂಡ ಅದ್ಭುತವಾಗಿ ಕೆಲಸ ಮಾಡುತ್ತಿದೆ. 6ರಿಂದ 7 ಲಕ್ಷ ರೂ. ಖರ್ಚಾಗುವ ಸಾಧ್ಯತೆ ಇದೆ. ನಂತರ ಮನೆ ನವೀಕರಣ ಕಾರ್ಯ ಮಾಡಿಸುವೆ.
| ಕೆ.ಜಿ.ಶ್ರೀನಿವಾಸಮೂರ್ತಿ ಮನೆ ಮಾಲೀಕ
ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ 100ಕ್ಕೂ ಅಧಿಕ ಮನೆಗಳನ್ನು ಪಕ್ಕಕ್ಕೆ ಸ್ಥಳಾಂತರ ಮತ್ತು ಮೇಲಕ್ಕೆ ಎತ್ತುತ್ತಿದ್ದೇವೆ. 45 ದಿನದೊಳಗೆ ಈ ಮನೆಯನ್ನು 6 ಅಡಿ ಎತ್ತರಕ್ಕೆ ಎತ್ತಿ ನಿಲ್ಲಿಸುತ್ತೇವೆ. ಕೇರಳದ ತಿರುವನಂತಪುರದಲ್ಲಿ ನಮ್ಮ ಮುಖ್ಯ ಕಚೇರಿ ಇದೆ.
| ಧರ್ಮೇಂದ್ರಕುಮಾರ್ ಬಿಹಾರಿ ಕಾಮಿರ್ಕರ ತಂಡದ ಮುಖ್ಯಸ್ಥ