ನ್ಯೂಸ್

ಪ್ರೀತಿಸ್ತಿದ್ದ ಹುಡ್ಗಿಗೆ ಗುಂಡಿಕ್ಕಿ, ಶೂಟ್​ ಮಾಡ್ಕೊಂಡು ಸತ್ತ; ತಿಂಗಳ ಹಿಂದಷ್ಟೇ ಬೇರೊಬ್ಬಳನ್ನು ಮದ್ವೆ ಆಗಿದ್ದ..

ಜೈಪುರ: ತಿಂಗಳ ಹಿಂದಷ್ಟೇ ಬೇರೊಬ್ಬಳನ್ನು ಮದುವೆಯಾಗಿದ್ದ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಗುಂಡಿಕ್ಕಿದ್ದಲ್ಲದೆ, ಬಳಿಕ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡೇಟು ತಿಂದ ಹುಡುಗಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಸ್ಥಾನ ದೌಸ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. 25 ವರ್ಷದ ವ್ಯಕ್ತಿ 17 ವರ್ಷದ ಹುಡುಗಿಗೆ ಗುಂಡಿಕ್ಕಿದ್ದು, ಆಕೆಯನ್ನು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ತಿಂಗಳಷ್ಟೇ ಬೇರೊಬ್ಬಳನ್ನು ಮದುವೆಯಾಗಿದ್ದ ಈತ ಈ ಹುಡುಗಿಗೆ ಬೆಳಗಿನ ಜಾವ 4ಕ್ಕೆ ತನ್ನ ಹೊಲಕ್ಕೆ ಬರುವಂತೆ ನಿನ್ನೆ ಆಹ್ವಾನಿಸಿದ್ದ.

ಈಕೆ ಹೊಲಕ್ಕೆ ಬರುತ್ತಿದ್ದಂತೆ ಈತ ಶೂಟ್ ಮಾಡಿದ್ದು, ನಂತರ ಅಲ್ಲಿಂದ ಸೀದಾ ಮನೆಗೆ ಬಂದಿದ್ದ. ಮನೆಗೆ ಬಂದವನೇ ಹುಡುಗಿಯ ಮನೆಯವರಿಗೆ ಕರೆ ಮಾಡಿ, ಆಕೆಗೆ ಗುಂಡಿಕ್ಕಿದ್ದೇನೆ, ಹೊಲದಲ್ಲಿ ಸತ್ತು ಬಿದ್ದಿದ್ದಾಳೆ ಎಂದು ಹೇಳಿದ್ದ. ನಂತರ ಈತ ತನ್ನ ಮನೆಯಲ್ಲೇ ತಲೆಗೆ ಗುಂಡು ಹೊಡೆದುಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಇವರಿಬ್ಬರ ಮನೆಯೂ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿವೆ.

ಹುಡುಗಿ ಮನೆಯವರು ತಕ್ಷಣ ಹೊಲಕ್ಕೆ ಧಾವಿಸಿದ್ದು, ಅಲ್ಲಿ ಗಂಭೀರವಾಗಿ ಗಾಯಗೊಂಡಿದ್ದವಳನ್ನು ಮರ್ಯಾದೆಗಂಜಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಅವಳ ಪರಿಸ್ಥಿತಿ ಬಿಗಡಾಯಿಸಲಾರಂಭಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿ ಇದ್ದಿದ್ದೇ ಈ ಪ್ರಕರಣಕ್ಕೆ ಕಾರಣ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.