ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹಿರಿಯ ಹುಲಿ ಹನುಮ ಗುರುವಾರ ಮೃತಪಟ್ಟಿದ್ದಾನೆ. ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಹನುಮನಿಗೆ ಸಫಾರಿಯಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿತ್ತು. ಆದರೂ ವಯೋಸಹಜ ಸಮಸ್ಯೆ, ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ.
ಈ ಹಿಂದೆ ಸಫಾರಿಯಲ್ಲಿ ದೀರ್ಘ ಕಾಲ ಜೀವಿಸಿದ್ದ ಕೃತ್ತಿಕಾ ದಾಖಲೆಯನ್ನು ಹನುಮ ಸರಿಗಟ್ಟಿದ್ದಾನೆ. 19 ವರ್ಷ ಕಾಲ ಜೀವಿಸಿದ್ದ ಕೃತ್ತಿಕಾ 2016ರ ಆಗಸ್ಟ್ನಲ್ಲಿ ಕೊನೆಯುಸಿರೆಳೆದಿತ್ತು. ಹನುಮ ಕೂಡ 19 ವರ್ಷ ಕಾಲ ತುಂಬು ಜೀವಿಸಿ ಕೊನೆಯುಸಿರೆಳೆದಿದ್ದಾನೆ.
ಚಾಮುಂಡಿ ಎಂಬ ಹುಲಿಯು ರಾಮ, ವಾಲಿ ಮತ್ತು ಹನುಮನಿಗೆ ಜನುಮ ನೀಡಿತ್ತು. 2020ರ ಡಿಸೆಂಬರ್ನಲ್ಲಿ ವಾಲಿ, 2022ರ ಮೇ ನಲ್ಲಿ ರಾಮ ಎಂಬ ಹುಲಿಗಳು ಸಾವನ್ನಪ್ಪಿದ್ದವು. ಇದೀಗ ಇವುಗಳ ಸಹೋದರ ಹನುಮ ಕೂಡ ಇಹಲೋಕ ತ್ಯಜಿಸಿದ್ದಾನೆ. ಇದೀಗ ಸಫಾರಿಯಲ್ಲಿ ಹುಲಿಗಳ ಸಂಖ್ಯೆ 4ಕ್ಕೆ ಇಳಿಕೆಯಾಗಿದೆ.
ಸಫಾರಿ ಇಲ್ಲವೇ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳ ಗರಿಷ್ಠ ಜೀವಿತಾವಧಿ 15 ರಿಂದ 17 ವರ್ಷ. ಆದರೆ ತ್ಯಾವರೆಕೊಪ್ಪ ಸಫಾರಿಯಲ್ಲಿ ಸರಾಸರಿ ವಯಸ್ಸನ್ನೂ ಮೀರಿ ಹುಲಿಗಳು ಜೀವನ ನಡೆಸಿರುವುದು ವಿಶೇಷ.