ಮೆಕ್ಕಾ: ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳ ಮೆಕ್ಕಾದಲ್ಲಿ ಗರಿಷ್ಠ ತಾಪಮಾನ ಮೀರಿದ ಬಿಸಿಲ ಹೊಡೆತಕ್ಕೆ ಹಜ್ ಯಾತ್ರೆಗೆ ತೆರಳಿದ್ದ 600ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದಾರೆ. ಇದೀಗ ವಿದೇಶಾಂಗ ಸಚಿವಾಲಯ ಬಿಡುಗಡೆಗೊಳಿಸಿರುವ ಹೊಸ ಪ್ರಕಟಣೆಯಲ್ಲಿ, ಹಜ್ ಯಾತ್ರೆಗೆ ತೆರಳಿದ್ದವರ ಪೈಕಿ 98 ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
"ಪ್ರತಿ ವರ್ಷ, ಅನೇಕ ಭಾರತೀಯ ಯಾತ್ರಿಕರು ಹಜ್ ಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್‌ಗಾಗಿ ಸೌದಿಗೆ ಭೇಟಿ ನೀಡಿದ್ದಾರೆ. ಹಜ್ ಯಾತ್ರೆಯ ಅವಧಿ ಜುಲೈ 9ರಿಂದ 22ರವರೆಗೆ ಇತ್ತು. ಇದುವರೆಗೆ 98 ಭಾರತೀಯ ಯಾತ್ರಿಕರು ಬಿಸಿಲ ತಾಪಕ್ಕೆ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣಗಳು ಅನಾರೋಗ್ಯ ಮತ್ತು ವೃದ್ಧಾಪ್ಯ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಈ ಪೈಕಿ ಬೆಂಗಳೂರು ಮೂಲದ ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದು, ಮೃತರನ್ನು ಕೌಸರ್ ರುಕ್ಸಾನ್ (69) ಮತ್ತು ಮೊಹಮ್ಮದ್ ಇಲಿಯಾಸ್ (50) ಎಂದು ಗುರುತಿಸಲಾಗಿದೆ. ಇವರು ಮೆಕ್ಕಾಗೆ 8 ಕಿ.ಮೀ ದೂರವಿರುವಾಗಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರು ಬಕ್ರೀದ್ ಹಬ್ಬ ಪ್ರಯುಕ್ತ ಹಜ್ ಯಾತ್ರೆಗೆ ತೆರೆಳಿದ್ದರು ಎನ್ನಲಾಗಿದೆ,(ಏಜೆನ್ಸೀಸ್).