ನ್ಯೂಸ್

ಕ್ಯಾಂಟರ್​ಗೆ Pickup​ ವಾಹನ ಡಿಕ್ಕಿ; 9 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

ಅಮೃತಸರ: ನಿಂತಿದ್ದ ಕ್ಯಾಂಟರ್​ಗೆ ಪಿಕ್​ಅಪ್​ ವಾಹನವೊಂದು (Pickup Vehicle) ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಂಜಾಬ್ನ ಫಿರೋಜ್​ಪುರದಲ್ಲಿ ನಡೆದಿದೆ.

ಮೃತರನ್ನು ಗೋಬಿಂದ್​, ವಿಕ್ಕಿ, ರವಿ, ಸುಖ್ವಿಂದರ್​, ಜಸ್ವಂತ್​, ಬಗ್ಗಾ, ಚಂದ್​ ಸಿಂಗ್​, ಮಲ್ಕಿತ್​ ಎಂದು ಗುರುತಿಸಲಾಗಿದ್ದು, ಇನ್ನೋರ್ವರ ಗುರುತು ಪತ್ತೆಯಾಗಿಲ್ಲ. ಫಿರೋಜ್​ಪುರದ ಗುರುಹರ್‌ಸಹೈ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಪಿಕ್​ಅಪ್​ ವಾಹನದಲ್ಲಿ (Pickup Vehicle) 25-30 ಜನ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಣಧೀರ್​ ಕುಮಾರ್, ಫಿರೋಜ್‌ಪುರ-ಫಜಿಲ್ಕಾ ರಸ್ತೆಯಲ್ಲಿ ಟ್ರಕ್ ಮತ್ತು ಮಹೀಂದ್ರಾ ಪಿಕಪ್ ವಾಹನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ನಸುಕಿನ ಜಾವ ಗೋಲುಕಾ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಪಿಕ್​ಅಪ್​ ವಾಹನದಲ್ಲಿದ್ದವರು ಜಲಾಲಾಬಾದ್​ಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಯ ವೆಚ್ಚವನ್ನು ಜಿಲ್ಲಾಡಳಿತದ ವತಿಯಿಂದ ಭರಿಸಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಣಧೀರ್​ ಕುಮಾರ್ ತಿಳಿಸಿದ್ದಾರೆ.