ನ್ಯೂಸ್

ಒಂದೇ ಕುಟುಂಬದ 6 ಮಂದಿ ಸೇರಿ 9 ಮೃತದೇಹಗಳು ಬಾವಿಯಲ್ಲಿ ಪತ್ತೆ...!

ಹೈದರಾಬಾದ್​: ಒಂದೇ ಕುಟುಂಬದ ಆರು ಮಂದಿ ಸೇರಿದಂತೆ 9 ಮಂದಿಯ ಮೃತದೇಹ ಬಾವಿಯೊಂದರಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ವಾರಂಗಲ್​ ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಆರು ಮಂದಿಯನ್ನು ಹೊರತುಪಡಿಸಿದರೆ, ಉಳಿದ ಮೂವರಲ್ಲಿ ಇಬ್ಬರು ಬಿಹಾರದವರಾಗಿದ್ದು, ಓರ್ವ ತ್ರಿಪುರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಗುರುವಾರ ನಾಲ್ಕು ಮೃತದೇಹಗಳನ್ನು ಪತ್ತೆಹಚ್ಚಿದ್ದರು. ಬಳಿಕ ಶುಕ್ರವಾರ ಮತ್ತೆ 5 ದೇಹಗಳು ಪತ್ತೆಯಾಗಿವೆ. ಶವಗಳ ಮೇಲೆ ಯಾವುದೇ ರೀತಿಯ ಗಾಯದ ಕಲೆಯಿಲ್ಲ. ಪ್ರಕರಣ ದಾಖಲಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿಯಲು ತನಿಖೆ ಕೈಗೊಂಡಿರುವುದಾಗಿ ವಾರಂಗಲ್​ ಪೊಲೀಸ್​ ಮುಖ್ಯಸ್ಥ ವಿ.ರವಿಂದರ್​ ಹೇಳಿದ್ದಾರೆ.

ಮೃತರಲ್ಲಿ ಏಳು ಮಂದಿ ಗೋಣಿ ಚೀಲ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಓರ್ವನ ಮಗಳ ಮೂರನೇ ವರ್ಷದ ಬರ್ತಡೇ ಹಿನ್ನೆಲೆಯಲ್ಲಿ ರಾತ್ರಿ ಒಟ್ಟಿಗೆ ಊಟ ಮುಗಿಸಿದ್ದರು. ಮಗಳ ತಂದೆಯು ಸಹ ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಇರಿಸಲಾಗಿದ್ದ ಆಸ್ಪತ್ರೆಗೆ ಪಂಚಾಯತ್​ ರಾಜ್​ ಸಚಿವ ಎರ್ರಾಬೆಲ್ಲಿ ದಯಾಕರ್​ ರಾವ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದು, ತನಿಖೆ ನಡೆದ ಬಳಿಕ ಸಾವಿಗೆ ಖಚಿತ ಕಾರಣ ತಿಳಿದುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಸೂಚಿಸಿದ್ದಾರೆ.

ಪೊಲೀಸರು ಇದಕ್ಕೂ ಮುನ್ನ ಇದೊಂದು ಆತ್ಮಹತ್ಯೆ ಇರಬಹುದೆಂದು ತಿಳಿದಿದ್ದರು. ಆದರೆ, ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಇಲ್ಲದೇ ಇರುವುದರಿಂದ ಶವಪರೀಕ್ಷೆ ನಡೆದ ನಂತರವಷ್ಟೇ ಕಾರಣ ಏನಿರಬಹುದೆಂದು ತಿಳಿಯಲಿದೆ. (ಏಜೆನ್ಸೀಸ್​)