ಶಿವಮೊಗ್ಗ: ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯದ ಮುಖ್ಯಮಂತ್ರಿಗಳು ಈಗ ಬೆಲೆ ಏರಿಕೆ ಗ್ಯಾರಂಟಿ ನೀಡಲು ಮುಂದಾಗಿದ್ದಾರೆ. ಹಾಲಿನ ದರದಲ್ಲಿ 5 ರೂ. ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಹೈನುಗಾರರಿಗೆ ಏಳು ರೂ. ಪ್ರೋತ್ಸಾಹ ಧನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಈಗ ಪ್ರೋತ್ಸಾಹ ಧನ 865 ಕೋಟಿ ರೂ. ಬಾಕಿ ಉಳಿದಿದೆ ಎಂದರು.
"ಕೇಂದ್ರ ಸರ್ಕಾರ ರಸಗೊಬ್ಬರ ನಿಯಂತ್ರಣ ಮಾಡುತ್ತದೆ. ಆದರೆ ರಾಜ್ಯ ಸರ್ಕಾರ ಮಾತ್ರ ಪಶು ಆಹಾರದ ಬೆಲೆ ಹೆಚ್ಚಿಸುತ್ತಿದೆ. ಈ ಹಿಂದೆ 50 ಮಿ.ಲೀ ಹಾಲು ಹೆಚ್ಚು ನೀಡುವುದಾಗಿ ಸರ್ಕಾರ ಹೇಳಿತ್ತು. ಕೆಲ ದಿನ ಮಾತ್ರ ಹೆಚ್ಚು ಹಾಲು ನೀಡಿ ಆನಂತರ ದ್ರೋಹ ಮಾಡಿತು. ಹಾಲಿನ ಕೊಬ್ಬಿನಾಂಶದಲ್ಲೂ ಹೈನುಗಾರರಿಗೆ ಮೋಸವಾಗುತ್ತಿದೆ" ಎಂದು ದೂರಿದರು.
"ಯಾವುದೇ ಕಾರಣಕ್ಕೂ ಹಾಲಿನ ದರ ಹೆಚ್ಚಳ ಮಾಡಬಾರದು. ಈಗ ಗ್ಯಾರಂಟಿ ಯೋಜನೆಗಳಿಗೆ ಕ್ರಮೇಣ ನಿಬಂಧನೆಗಳನ್ನು ವಿಧಿಸಲಾಗುತ್ತಿದೆ. ರೈತ ಉತ್ಪಾದಕ ಸಂಘ ಎಫ್ಪಿಓಗೆ (FPO) ಸಂಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ" ಎಂದು ಹೇಳಿದ್ದಾರೆ.