ನ್ಯೂಸ್

8 ಪಿಎಂ ಮದ್ಯ ತಯಾರಕ ಈಗ ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ: ಯಾರು ಈ ಹೊಸ ಕುಬೇರ?

ನವದೆಹಲಿ: ಫೋರ್ಬ್ಸ್‌ ಬಿಲಿಯನೇರ್ ಪಟ್ಟಿಗೆ ಈಗ ಭಾರತೀಯರೊಬ್ಬರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. 80 ಇಳಿವಯಸ್ಸಿನಲ್ಲಿ ಕುಬೇರರ ಪಟ್ಟಿಗೆ ಸೇರಿರುವ ಈ ವ್ಯಕ್ತಿ ಮದ್ಯ ಕಂಪನಿಯ ಮಾಲಿಕ!

ಇವರೇ ಲಲಿತ್ ಖೈತಾನ್. ದೆಹಲಿಯ ರಾಡಿಕೊ ಖೈತಾನ್‌ ಕಂಪನಿಯ ಅಧ್ಯಕ್ಷ. ಇತ್ತೀಚೆಗೆ ಫೋರ್ಬ್ಸ್‌ನಿಂದ ಭಾರತದ ಹೊಸ ಬಿಲಿಯನೇರ್ ಎಂದು ಗುರುತಿಸಲ್ಪಟ್ಟಿದ್ದಾರೆ.

ಈ ವರ್ಷ ಅವರ ಕಂಪನಿಯ ಷೇರುಗಳ ಬೆಲೆಯು ಶೇಕಡಾ 50ರಷ್ಟು ಹೆಚ್ಚಳವನ್ನು ಕಂಡಿದೆ. ಹೀಗಾಗಿ, ಅವರ ನಿವ್ವಳ ಆಸ್ತಿ ಮೌಲ್ಯವು 1 ಬಿಲಿಯನ್‌ ಡಾಲರ್​ಗೆ (ಅಂದಾಜು 8300 ಕೋಟಿ ರೂಪಾಯಿ) ಏರಿದೆ. ತಮ್ಮ ಕಂಪನಿಯಲ್ಲಿ ಅವರು ಶೇಕಡಾ 40ರಷ್ಟು ಮಾಲೀಕತ್ವದ ಪಾಲನ್ನು ಹೊಂದಿದ್ದಾರೆ.

ಲಲಿತ್ ಖೈತಾನ್ ಅವರು ಮ್ಯಾಜಿಕ್ ಮೊಮೆಂಟ್ಸ್ ವೋಡ್ಕಾ, 8 PM ವಿಸ್ಕಿ, ಓಲ್ಡ್ ಅಡ್ಮಿರಲ್ ಬ್ರಾಂಡಿ ಮತ್ತು ರಾಮ್‌ಪುರ್ ಸಿಂಗಲ್ ಮಾಲ್ಟ್‌ನಂತಹ ವೈವಿಧ್ಯಮಯ ಆಲ್ಕೊಹಾಲ್​ ಪಾನೀಯಗಳನ್ನು ಉತ್ಪಾದಿಸುವ ಪ್ರಸಿದ್ಧ ಕಂಪನಿಯಾದ ರಾಡಿಕೊ ಖೈತಾನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಖೈತಾನ್ ಅವರು 1972 ರಲ್ಲಿ ರಾಮ್‌ಪುರ ಡಿಸ್ಟಿಲರಿ ವ್ಯವಹಾರವನ್ನು 16 ಲಕ್ಷ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಳ್ಳುವವರೆಗೂ ಒಬ್ಬ ಟೀಟೋಟಲರ್ (ಮದ್ಯಪಾನ ಮಾಡದ ವ್ಯಕ್ತಿ) ಆಗಿದ್ದರು. ಅವರ ತಂದೆ ಜಿ.ಎನ್. ಖೈತಾನ್ ಅವರು ಸಾಂಪ್ರದಾಯಿಕ ಮಾರ್ವಾಡಿ ಕುಟುಂಬಕ್ಕೆ ಸೇರಿದ್ದು, ಜೀವನಪರ್ಯಂತ ಟೀಟೋಟೇಲರ್ ಆಗಿದ್ದರು.

ಬೆಂಗಳೂರಿನಲ್ಲಿ ಇಂಜಿನಿಯರಿಂಗ್:

ಖೈತಾನ್ ಅವರು ತಮ್ಮ ಶಿಕ್ಷಣವನ್ನು ಅಜ್ಮೀರ್‌ನ ಮೇಯೊ ಕಾಲೇಜು ಮತ್ತು ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜಿನಂತಹ ಗೌರವಾನ್ವಿತ ಸಂಸ್ಥೆಗಳಲ್ಲಿ ಪಡೆದರು. ಅವರು ಬೆಂಗಳೂರಿನ ಬಿಎಂಎಸ್​ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಗಳಿಸಿದರು. ಅಲ್ಲದೆ, ಅಮೆರಿಕದ ಹಾರ್ವರ್ಡ್‌ನಲ್ಲಿ ಮ್ಯಾನೇಜಿರಿಯಲ್ ಫೈನಾನ್ಸ್ ಮತ್ತು ಅಕೌಂಟಿಂಗ್ ಕೋರ್ಸ್ ಪೂರ್ಣಗೊಳಿಸಿದರು.

ಹಿಂದೆ ರಾಂಪುರ್ ಡಿಸ್ಟಿಲರಿ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್ ಎಂದು ಗುರುತಿಸಲ್ಪಟ್ಟ ಈ ಕಂಪನಿಯು ನಂತರ ರಾಡಿಕೊ ಖೈತಾನ್ ಹೆಸರು ಬದಲಿಸಿಕೊಂಡಿತು. 1970 ರ ದಶಕದ ಆರಂಭದಲ್ಲಿ, ಲಲಿತ್ ಖೈತಾನ್ ಅವರ ತಂದೆ ಜಿಎನ್ ಖೈತಾನ್ ಅವರು ಆರ್ಥಿಕವಾಗಿ ಬಳಲುತ್ತಿದ್ದ ಈ ಕಂಪನಿಯನ್ನು ಸ್ವಾಧೀನಪಡಿಸಿಕೊಂಡರು.

1995 ರಲ್ಲಿ, ಜಿ.ಎನ್​. ಖೈತಾನ್ ತಮ್ಮ ನಾಲ್ಕು ಗಂಡುಮಕ್ಕಳ ನಡುವೆ ಕುಟುಂಬದ ವ್ಯವಹಾರಗಳನ್ನು ಹಂಚಿಕೆ ಮಾಡಿದಾಗ ತಂದೆಯಿಂದ ಲಲಿತ್​ ಖೇತಾನ್‌ ಅವರಿಗೆ ಡಿಸ್ಟಿಲ್ಲರಿ ದೊರೆಯಿತು.