More

    ಜೆಕ್ ನ್ಯಾಯಾಲಯದ ಮೊರೆ ಹೋಗಿ: ಪನ್ನುನ್ ಹತ್ಯೆ ಸಂಚು ಆರೋಪಿ ನಿಖಿಲ್​ ಗುಪ್ತಾ ಕುಟುಂಬಕ್ಕೆ ಸೂಚಿಸಿದ ಸುಪ್ರೀಂ

    ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ನಿಖಿಲ್ ಗುಪ್ತಾ ಅವರನ್ನು ಜೆಕ್​ ಗಣರಾಜ್ಯದ ಪ್ರೇಗ್‌ನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಜೆಕ್ ನ್ಯಾಯಾಲಯದ ಮೊರೆ ಹೋಗುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಗುಪ್ತಾ ಅವರ ಕುಟುಂಬಕ್ಕೆ ಸೂಚಿಸಿದೆ.

    52 ವರ್ಷದ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರು ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ವಿರುದ್ಧದ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಅಮೆರಿಕದಲ್ಲಿ ಆರೋಪಿಸಲಾಗಿದೆ. ಗುಪ್ತಾ ಅವರನ್ನು ಜೆಕ್ ಗಣರಾಜ್ಯದಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಅವರ ಕುಟುಂಬ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

    ಅಪರಿಚಿತ ಭಾರತೀಯ ಸರ್ಕಾರಿ ನೌಕರನ ನಿರ್ದೇಶನದ ಮೇರೆಗೆ ಗುಪ್ತಾ ಅವರು ಅಮೆರಿಕದ ನೆಲದಲ್ಲಿ ಪನ್ನುನ್‌ನನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದಾರೆ. ಗುಪ್ತಾ ಅವರನ್ನು ಈ ವರ್ಷದ ಜೂನ್‌ನಲ್ಲಿ ಜೆಕ್ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದರು.

    ಜೆಕ್ ಅಧಿಕಾರಿಗಳೊಂದಿಗೆ ಮಧ್ಯಸ್ಥಿಕೆಗಾಗಿ ನೆರವು ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಕುಟುಂಬವು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ.

    ಸುಪ್ರೀಂ ಕೋರ್ಟ್‌ನಲ್ಲಿ ಕುಟುಂಬವು ಸಲ್ಲಿಸಿದ ಅರ್ಜಿಯಲ್ಲಿ, “ಅರ್ಜಿದಾರರು ಕಾನೂನು ಪಾಲಿಸುವ ಭಾರತೀಯ ಪ್ರಜೆಯಾಗಿದ್ದು, ಪ್ರೇಗ್‌ನಲ್ಲಿರುವ ವಿದೇಶಿ ಜೈಲು ಸೌಲಭ್ಯದಲ್ಲಿ ಅವರಿಗೆ ಜೀವ ಬೆದರಿಕೆ ಇದೆ” ಎಂದು ಹೇಳಿದೆ.

    ಖಲಿಸ್ತಾನಿ ನಾಯಕ ಗುರುಪತ್ವಂತ್ ಪನ್ನು ಹತ್ಯೆಗಾಗಿ ಸರ್ಕಾರದ ಸಂಚಿನಲ್ಲಿ ದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ನಿಖಿಲ್ ಗುಪ್ತಾ, ಜೂನ್‌ನಿಂದ ಜೆಕ್ ರಿಪಬ್ಲಿಕ್‌ನ ಜೈಲಿನಲ್ಲಿದ್ದಾರೆ.

    ಶುಕ್ರವಾರ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ನೇತೃತ್ವದ ಪೀಠದ ಮುಂದೆ ಅರ್ಜಿಯ ವಿಚಾರಣೆಗೆ ಬಂದಿತು. ಈ ವಿಷಯವನ್ನು ತುರ್ತು ವಿಚಾರಣೆಗೆ ಕೋರಿ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು.

    ಮಾನವ ಹಕ್ಕುಗಳ ಉಲ್ಲಂಘನೆಯ ಆಧಾರದ ಮೇಲೆ ಕುಟುಂಬವು ಸಹಾಯವನ್ನು ಕೋರಿದೆ, ಗುಪ್ತಾ ಅವರು ಜೂನ್‌ನಿಂದ ಅಕ್ರಮ ಬಂಧನದಲ್ಲಿದ್ದಾರೆ, ಪದೇಪದೆ ವಿನಂತಿಸಿದರೂ ವಿದೇಶಾಂಗ ಸಚಿವಾಲಯವು ಯಾವುದೇ ಸಹಾಯ ನೀಡಿಲ್ಲ ಎಂದು ಹೇಳಿದ್ದಾರೆ.

    ಜೆಕ್ ಗಣರಾಜ್ಯದ ನ್ಯಾಯ ಸಚಿವಾಲಯವು ನಿಖಿಲ್ ಗುಪ್ತಾ ಬಂಧನವನ್ನು ದೃಢಪಡಿಸಿದೆ. ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್‌ ಗುರಿಯಾಗಿಸಿಕೊಂಡು ‘ಬಾಡಿಗೆಗಾಗಿ ಕೊಲೆ’ ಸಂಚಿನಲ್ಲಿ ಭಾರತೀಯ ಪ್ರಜೆ ಗುಪ್ತಾ ಭಾಗಿಯಾಗಿದ್ದಾನೆ ಎಂದು ಆರೋಪಿಸಿರುವ ಅಮೆರಿಕ ಆದೇಶದ ಮೇರೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts