ನ್ಯೂಸ್

ಬಾಯಲ್ಲಿ ಮೊಬೈಲ್ ಚಾರ್ಜರ್ ವೈರ್​ ಇಟ್ಕೊಂಡ 8 ತಿಂಗಳ ಮಗು ವಿದ್ಯುತ್​ ಶಾಕ್​ನಿಂದ ದುರಂತ ಸಾವು

ಉತ್ತರಕನ್ನಡ: ಮಗುವಿಗೆ ಜನ್ಮ ಕೊಡುವುದಷ್ಟೇ ಅಲ್ಲ, ಅದು ಬೆಳೆದು ಒಂದು ಹಂತಕ್ಕೆ ಬರುವವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ. ಪಾಲಕರು ಮಾಡುವ ಒಂದು ಸಣ್ಣ ಎಡವಟ್ಟು ಅಥವಾ ನಿರ್ಲಕ್ಷ್ಯ ಏನು ಅರಿಯದ ಮಗುವಿನ ಪ್ರಾಣವನ್ನೇ ಕಸಿಯುತ್ತದೆ ಎನ್ನುವುದಕ್ಕೆ ಈ ಒಂದು ತಾಜಾ ಘಟನೆ ದುರಂತ ಉದಾಹರಣೆಯಾಗಿದೆ.

ಹೌದು, ಮೊಬೈಲ್ ಚಾರ್ಜರ್ ಬಾಯಿಯಲ್ಲಿ ಹಾಕಿಕೊಂಡ ಪರಿಣಾಮ ವಿದ್ಯುತ್​ ಶಾಕ್​ನಿಂದ 8 ತಿಂಗಳ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡದ ಕಾರವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ. ಮೊಬೈಲ್​ ಅನ್ನು ಚಾರ್ಜ್​ ಪಿನ್​ನಿಂದ ತೆಗೆದ ಬಳಿಕ ಸ್ವಿಚ್​ ಆಫ್​ ಮಾಡುವ ಅಭ್ಯಾಸ ಕೆಲವರಿಗೆ ಇರುವುದಿಲ್ಲ. ಈ ಒಂದು ದುರಾಭ್ಯಾಸ ಒಂದು ಮಗುವಿನ ಪ್ರಾಣವನ್ನೇ ತೆಗೆದಿದೆ.

ಸಿದ್ದರ ಗ್ರಾಮದ ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಇದೀಗ ವಿದ್ಯುತ್​ ಶಾಕ್​ನಿಂದ ಮೃತಪಟ್ಟಿದೆ. ಮೊಬೈಲ್ ಚಾರ್ಜ್ ಹಾಕಿ ತೆಗೆದ ನಂತರ ಪಾಲಕರು ಸ್ವಿಚ್ ಆಫ್​ ಮಾಡಿರಲಿಲ್ಲ. ಮಕ್ಕಳು ಏನೇ ಕಂಡರು ಮೊದಲು ಬಾಯಿಗೆ ಹಾಕಿಕೊಳ್ಳುತ್ತವೆ. ಅದೇ ರೀತಿ ಮಗು ಸಾನಿಧ್ಯ ಕೂಡ ಚಾರ್ಜರ್ ಪಿನ್ ಅನ್ನು ಬಾಯಲ್ಲಿ ಹಾಕಿಕೊಂಡಾಗ ವಿದ್ಯುತ್​ ಶಾಕ್​ನಿಂದ ದುರಂತ ಸಂಭವಿಸಿದೆ.

ತಕ್ಷಣ ಬೈಕ್​ನಲ್ಲಿ ಮಗುವನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲೇ ಮಗು ಮೃತಪಟ್ಟಿದೆ. ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. (ದಿಗ್ವಿಜಯ ನ್ಯೂಸ್​)