ನ್ಯೂಸ್

ತವರಿನಲ್ಲೇ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ಸ್​: 8 ಮಂದಿ AAP ಕಾರ್ಯಕರ್ತರ ಬಂಧನ

ಅಹಮದಾಬಾದ್​: ಮೋದಿ ಹಠಾವೋ, ದೇಶ್​ ಬಚಾವೋ (ಮೋದಿ ಓಡಿಸಿ, ದೇಶ ಉಳಿಸಿ) ಎಂಬ ಪ್ರಧಾನಿ ಮೋದಿ ಕುರಿತ ಆಕ್ಷೇಪಾರ್ಹ ಪೋಸ್ಟರ್ ಅನ್ನು ಅಹಮದಾಬಾದ್​ ನಗರದ ವಿವಿಧ ಪ್ರದೇಶಗಳಲ್ಲಿ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಗುಜರಾತ್​ ಪೊಲೀಸರು ಇಂದು (ಮಾ.31) ಬಂಧಿಸಿದ್ದಾರೆ.

ಆಮ್ ಆದ್ಮಿ ಪಕ್ಷ (ಎಎಪಿ)ವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಷ್ಟ್ರವ್ಯಾಪಿ ಪೋಸ್ಟರ್ ಅಭಿಯಾನ ಆರಂಭಿಸಿದ ಕೇವಲ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಅನಧಿಕೃತವಾಗಿ ನಗರದ ವಿವಿಧ ಭಾಗಗಳಲ್ಲಿ ಆಕ್ಷೇಪಾರ್ಹ ಪೋಸ್ಟರ್​ಗಳನ್ನು ಅಂಟಿಸಲಾಗಿತ್ತು. ಬಂಧಿತರ ಮೇಲೆ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದು ಅಹಮದಾಬಾದ್​ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ತಮ್ಮ ಪಕ್ಷದ ಕಾರ್ಯಕರ್ತರು ಎಂದು ಗುಜರಾತ್ ಎಎಪಿ ಮುಖ್ಯಸ್ಥ ಇಸುದನ್ ಗಧ್ವಿ ಹೇಳಿದ್ದಾರೆ. ಇದು ಬಿಜೆಪಿಯ "ಸರ್ವಾಧಿಕಾರ" ಧೋರಣೆ ಎಂದು ಗದ್ವಿ ಆರೋಪಿಸಿದರು. ಈ ಬಂಧನವು ಬಿಜೆಪಿ ಪಕ್ಷಕ್ಕೆ ನಮ್ಮ ಮೇಲಿನ ಭಯದ ಸಂಕೇತವಾಗಿದೆ ಎಂದರು.

ಬಿಜೆಪಿಯ ಸರ್ವಾಧಿಕಾರವನ್ನು ನೋಡಿ! ಮೋದಿ ಹಠಾವೋ ದೇಶ್ ಬಚಾವೋ ಎಂಬ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಗುಜರಾತಿನ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರನ್ನು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜೈಲಿಗೆ ಹಾಕಲಾಗಿದೆ. ಇದು ಮೋದಿ ಮತ್ತು ಬಿಜೆಪಿಯ ಭಯವಲ್ಲದೇ ಮತ್ತಿನ್ನೇನು? ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಹೋರಾಟ ನಿರಂತರ ಎಂದು ಹೇಳಿದರು.

ಎಎಪಿಯು "ಮೋದಿ ಹಠಾವೋ, ದೇಶ್ ಬಚಾವೋ" ಅಭಿಯಾನವನ್ನು ದೇಶಾದ್ಯಂತ 11 ಭಾಷೆಗಳಲ್ಲಿ ಪ್ರಾರಂಭಿಸಿದೆ. ಇಂಗ್ಲಿಷ್, ಹಿಂದಿ ಮತ್ತು ಉರ್ದು ಜತೆಗೆ ಗುಜರಾತಿ, ಪಂಜಾಬಿ, ತೆಲುಗು, ಬೆಂಗಾಲಿ, ಒರಿಯಾ, ಕನ್ನಡ, ಮಲಯಾಳಂ ಮತ್ತು ಮರಾಠಿಯಲ್ಲಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ. ಕಳೆದ ವಾರ, ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಸಾವಿರಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯ ವಿವಿಧ ಏರಿಯಾಗಳ ಗೋಡೆಗಳ ಮೇಲೆ ಕಾಣಿಸಿಕೊಂಡವು. ಈ ಸಂಬಂಧ 49 ಎಫ್‌ಐಆರ್‌ಗಳನ್ನು ದಾಖಲಿಸಿ, ಆರು ಜನರನ್ನು ಬಂಧಿಸಲಾಗಿದದೆ. ಬಂಧಿತರಲ್ಲಿ ಇಬ್ಬರು ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕೂಡ ಸೇರಿದ್ದಾರೆ.

ಪೊಸ್ಟರ್​ಗಳನ್ನು ಅಂಟಿಸಿ, ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸಿದ್ದಕ್ಕಾಗಿ ಮತ್ತು ಮುದ್ರಿಸಲಾದ ಪೋಸ್ಟರ್​ಗಳಲ್ಲಿ ಮುದ್ರಣಾಲಯದ ಹೆಸರನ್ನು ಬರೆಯದೆ ಕಾನೂನನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಪ್ರಶ್ನೆ ಮಾಡಿದಾಗ ಸ್ವಾತಂತ್ರ್ಯದ ಚಳುವಳಿಯಲ್ಲಿ ತಮ್ಮ ವಿರುದ್ಧ ಪೋಸ್ಟರ್​ ಅಂಟಿಸಿದ ಯಾರನ್ನೂ ಬ್ರಿಟಿಷರು ಬಂಧಿಸಿರಲಿಲ್ಲ ಎನ್ನುವ ಮೂಲಕ ಬಿಜೆಪಿ ನಡೆಯನ್ನು ಟೀಕಿಸಿದರು. (ಏಜೆನ್ಸೀಸ್​)