ನ್ಯೂಸ್

ಬೆಲೆಬಾಳುವ ಕಿರೀಟ, ವಜ್ರ... 7 ನಿಮಿಷಗಳಲ್ಲಿ ಲೂಟಿ! ಸಿನಿಮೀಯ ಶೈಲಿಯಲ್ಲಿ ಕಳ್ಳರ ಕೈಚಳಕ | Louvre Museum

Louvre Museum: ಪ್ಯಾರಿಸ್‌ನ ವಿಶ್ವಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ ನಿನ್ನೆ (ಅ.19) ಬೆಳಗಿನ ಜಾವ ನೆಪೋಲಿಯನ್ ಯುಗದ ಬೆಲೆಬಾಳುವ ವಜ್ರ, ಆಭರಣಗಳ ಕಳ್ಳತನ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರತಿದಿನ ಸುಮಾರು 30,000ಕ್ಕೂ ಅಧಿಕ ಜನರು ಭೇಟಿ ನೀಡುವ ಈ ವಸ್ತುಸಂಗ್ರಹಾಲಯದಲ್ಲಿ ವಿಶ್ವಪ್ರಸಿದ್ಧ ಮತ್ತು ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಆದರೆ, ಕಳ್ಳರು ಇಂತಹ ಬೆಲೆಬಾಳುವ ಮತ್ತು ಸಾವಿರಾರೂ ವರ್ಷಗಳ ಇತಿಹಾಸವಿರುವ ಆಭರಣಗಳನ್ನು ಹೊತ್ತೊಯ್ದಿರುವುದು ಸದ್ಯ ಸಚಿವರನ್ನೇ ಬೆರಗಾಗಿಸಿದೆ.

ಮೋನಾಲಿಸಾ ಪೇಟಿಂಗ್​ ಇರುವುದು ಕೂಡ ಇದೇ ಮ್ಯೂಸಿಯಂನಲ್ಲಿ ಎಂಬುದು ಗಮನಾರ್ಹ. ಈ ವಸ್ತುಸಂಗ್ರಹಾಲಯದಲ್ಲಿ ಕಳ್ಳತನದ ಬಗ್ಗೆ ಫ್ರೆಂಚ್ ಸಂಸ್ಕೃತಿ ಸಚಿವೆ ರಚಿಡಾ ದಾತಿ ತೀವ್ರ ಬೇಸರ ಹೊರಹಾಕಿದ್ದಾರೆ. "ಲೂಟಿ ಬಗ್ಗೆ ಮಾಹಿತಿ ಬಂದ ಕೆಲವೇ ನಿಮಿಷಗಳಲ್ಲಿ ನಾವು ಸ್ಥಳಕ್ಕೆ ಧಾವಿಸಿದೆವು. ದರೋಡೆ ಸುಮಾರು 7-8 ನಿಮಿಷಗಳಲ್ಲಿ ನಡೆದಿದೆ. ಕೆಲಸ ಬಹಳ ಬೇಗನೆ ಯಾರಿಗೂ ಅನುಮಾನ ಬರದಂತೆ, ಕಣ್ಣಿಗೆ ಬೀಳದಂತೆ ಮಾಡಿ ಮುಗಿಸಿದ್ದಾರೆ. ಇಲ್ಲೇ ಗೊತ್ತಾಗುತ್ತೆ ಅವರು ಲಪಟಾಯಿಸುವುದರಲ್ಲಿ ನಿಸ್ಸೀಮರು ಎಂದು. ಇದೊಂದು ರೀತಿ ಸಿನಿಮಾ ಸ್ಕ್ರಿಪ್ಟ್‌ನಂತಿದೆ. ಕಳ್ಳತನದ ಬಳಿಕ ಪ್ರಸ್ತುತ ಮ್ಯೂಸಿಯಂಗೆ ಬೀಗ ಹಾಕಲಾಗಿದೆ" ಎಂದಿದ್ದಾರೆ.

"ದರೋಡೆ ಬಳಿಕ ವಸ್ತುಸಂಗ್ರಹಾಲಯದ ಪರಿಶೀಲನೆಯ ವೇಳೆ ಒಂದು ಪ್ರತ್ಯೇಕ ಸ್ಥಳದಲ್ಲಿ ಒಂದೇ ಒಂದು ರತ್ನ ಸಿಕ್ಕಿದೆ. ಪ್ರಾಯಶಃ ಖದೀಮರು ಲೂಟಿ ಮಾಡಿಕೊಂಡು ಹೋಗುವಾಗ ಇದನ್ನು ಬೀಳಿಸಿಕೊಂಡು ಪರಾರಿಯಾಗಿರಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ. ಈ ಗ್ಯಾಂಗ್​ ಎಲ್ಲಿಂದ ಬಂದಿದ್ದು? ಇದರಲ್ಲಿ ಯಾರ ಕೈವಾಡವಿದೆ ಎಂಬುದರ ಸಂಪೂರ್ಣ ತನಿಖೆ ನಡೆಯುತ್ತಿದೆ" ಎಂದು ಸಚಿವರು ತಿಳಿಸಿದ್ದಾರೆ.

ಏನೆಲ್ಲ ಕಳ್ಳತನ?

ಫ್ರೆಂಚ್ ದಿನಪತ್ರಿಕೆ 'ಲೆ ಪ್ಯಾರಿಸಿಯನ್' ಪ್ರಕಾರ, ಕಳ್ಳರ ಗ್ಯಾಂಗ್​ ನಿರ್ಮಾಣ ಕಾರ್ಯ ನಡೆಯುತ್ತಿರುವ ಸೀನ್-ಮುಖದ ಮುಂಭಾಗದ ಮೂಲಕ ಪ್ರವೇಶವನ್ನು ಪಡೆದಿದ್ದಾರೆ. ಅವರು ಅಪೊಲೊ ಗ್ಯಾಲರಿಯಲ್ಲಿರುವ ಕೋಣೆಯನ್ನು ತಲುಪಲು ಸರಕು ಲಿಫ್ಟ್ ಅನ್ನು ಬಳಸಿದ್ದಾರೆ. ಕಿಟಕಿಗಳನ್ನು ಒಡೆದು, ನೆಪೋಲಿಯನ್ ಮತ್ತು ಸಾಮ್ರಾಜ್ಞಿಯ ಆಭರಣ ಸಂಗ್ರಹದ ಒಂಬತ್ತು ಆಭರಣ ಮತ್ತು ನೆಪೋಲಿಯನ್ ಯುಗದ 9 ರತ್ನಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ,(ಏಜೆನ್ಸೀಸ್).