ನ್ಯೂಸ್

ಕಾರಿನ ಬಾನೆಟ್​ ಒಳಗಿತ್ತು 7 ಅಡಿ ಉದ್ದದ ಹೆಬ್ಬಾವು! ಬೆಚ್ಚಿಬಿದ್ದ ಮೆಕ್ಯಾನಿಕ್​, ವಿಡಿಯೋ ವೈರಲ್​

ಮೋಹನ್​ ಶೆಟ್ಟಿ

ಪ್ರಯಾಗ್‌ರಾಜ್: ರಿಪೇರಿಗೆಂದು ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿನ ಬಾನೆಟ್‌ನಿಂದ ಬೃಹತ್ ಹೆಬ್ಬಾವೊಂದು ಹೊರಬಂದಿದ್ದು ಸ್ಥಳೀಯರನ್ನು ಒಂದು ನಿಮಿಷ ಭಾರೀ ಆತಂಕಕ್ಕೆ ದೂಡಿದೆ. ಈ ಭಯಾನಕ ಘಟನೆ ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ವರದಿಯಾಗಿದ್ದು, ದೃಶ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಗ್ಯಾರೇಜ್‌ನೊಳಗೆ ನಿಲ್ಲಿಸಿದ್ದ ಕಾರಿನಲ್ಲಿರುವ ಸಮಸ್ಯೆ ಏನು ಎಂದು ತಿಳಿಯಲು ಅದರ ಬಾನೆಟ್ ತೆರೆದ ಮೆಕ್ಯಾನಿಕ್‌ಗೆ ಕಾಣಿಸಿದ್ದು 7 ಅಡಿ ಉದ್ದದ ಹೆಬ್ಬಾವು.

ಪ್ರಯಾಗ್‌ರಾಜ್‌ನ ಸಿವಿಲ್ ಲೈನ್ಸ್‌ನಲ್ಲಿರುವ ಹೋಟೆಲ್ ಅಜಯ್ ಇಂಟರ್‌ನ್ಯಾಶನಲ್ ಹೊರಗಿರುವ ಗ್ಯಾರೇಜ್‌ನಲ್ಲಿ ಈ ಘಟನೆ ಸಂಭವಿಸಿದೆ. ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ಕಾರಿನ ಬಾನೆಟ್ ತೆರೆದಾಗ 7 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಗಾಬರಿಗೊಂಡ ಮೆಕ್ಯಾನಿಕ್ ತಕ್ಷಣವೇ ಅರಣ್ಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಾನೆಟ್​ನ ಒಳಗೆ ಬ್ಯಾಟರಿ ಮೇಲೆ ಆರಾಮದಾಯಕವಾಗಿ ಮಲಗಿದ್ದ ಹೆಬ್ಬಾವನ್ನು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದೆ.

ರಕ್ಷಣಾ ಕಾರ್ಯಾಚರಣೆಯನ್ನು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಕಾರಿನ ಬ್ಯಾನೆಟ್​ ತೆಗೆದು ಹೆಬ್ಬಾವನ್ನು ಕಂಡ ಮೆಕ್ಯಾನಿಕ್​ ಭಾರೀ ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಅಧಿಕಾರಿಗಳ ರಕ್ಷಣೆ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ,(ಏಜೆನ್ಸೀಸ್).