ನವದೆಹಲಿ: ಆರೋಗ್ಯಕರ ಜೀವನ ಹೊಂದಲು ನಿಯಮಿತವಾದ ವ್ಯಾಯಾಮ ಅತೀ ಮುಖ್ಯ. ಅದರಲ್ಲೂ ನಮ್ಮ ಇಂದಿನ ಯುಗದಲ್ಲಿ ನವ ಯುವಕ-ಯುವತಿಯರು ಜಿಮ್ಗೆ ಹೋಗಲು, ಎಕ್ಸ್ಸೈಸ್ ಮಾಡಲು ನಿರಾಕರಿಸುವುದು, ಬದ್ಧತೆ ಇಲ್ಲದಿರುವ ಅದೆಷ್ಟೋ ಉದಾಹರಣೆಗಳು ನಮಗೆ ಕಾಣ ಸಿಗುತ್ತವೆ. ಇವರಿಗೆಲ್ಲಾ ಮಾದರಿ ಎಂಬಂತೆ 68ರ ವೃದ್ಧೆಯೊಬ್ಬರು ಜಿಮ್ನಲ್ಲಿ ವೈಟ್ ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಿಡಿಯೋದಲ್ಲಿ 68ರ ವೃದ್ಧೆ ತಮ್ಮ ಪುತ್ರ ಜಿಮ್ ಟ್ರೈನರ್ ಸಾಂಗ್ವಾನ್ ಅವರೊಂದಿಗೆ ವ್ಯಾಯಾಮ ಮಾಡುವುದನ್ನು ಕಾಣಬಹುದು. ಜಿಮ್ನಲ್ಲಿ ಮಹಿಳೆಯ ಪುತ್ರ ತರಬೇತಿದಾರರಾಗಿ ಕೆಲಸ ಮಾಡುತ್ತಾರೆ. ಯುವಕ-ಯುವತಿಯರು ಎತ್ತಲು ಹರಸಾಹಸ ಪಡುವಂತ ತೂಕಗಳನ್ನು ಇವರು ಲಿಫ್ಟ್ ಮಾಡುತ್ತಾರೆ. ವೃದ್ಧೆಯು ಉತ್ಸಾಹ, ಚೈತನ್ಯದಿಂದ ಇರುವುದು ನೋಡುಗರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ತಮ್ಮ ತಾಯಿ ತೂಕವನ್ನು ಎತ್ತಿಕೊಳ್ಳುವ ದೃಶ್ಯವನ್ನು ಅವರ ಮಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿದ ಅನೇಕ ನೆಟ್ಟಿಗರು ಸಾಂಗ್ವಾನ್ ಅವರ ತಾಯಿಯ ಹುಮ್ಮಸ್ಸು, ಚೈತನ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ನಿಮ್ಮ ತಾಯಿ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಅಮ್ಮ ವೈಟ್ ಲಿಫ್ಟ್ ಮಾಡುವ ದೃಶ್ಯವನ್ನು ಹಂಚಿಕೊಂಡಿರುವ ಸಾಂಗ್ವಾನ್, ನನ್ನ ತಾಯಿ ಅವರಲ್ಲಿರುವ ಉತ್ತಮ ವರ್ಶನ್ ಅನ್ನು ಹೊರಹಾಕಲು ತನ್ನಲ್ಲೇ ಪ್ರಮಾಣ ಮಾಡಿಕೊಂಡಿದ್ದಾರೆ ಎಂಬ ಶೀರ್ಷಿಕೆಯಡಿ ದೃಶ್ಯವನ್ನು ಪೋಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).