ನ್ಯೂಸ್

ಹೋಟೆಲ್​ನಲ್ಲಿ ಭಾರಿ ಅಗ್ನಿ ಅವಘಡ; 66 ಮಂದಿ ಮೃತ.. 51 ಜನರಿಗೆ ಗಾಯ | Turkey

ಇಸ್ತಾನ್‌ಬುಲ್‌: ಟರ್ಕಿಯ(Turkey) ವಾಯುವ್ಯ ಪ್ರದೇಶದಲ್ಲಿರುವ ಕಾರ್ತಲಕಯಾ ಸ್ಕೀ ರೆಸಾರ್ಟ್ ಹೋಟೆಲ್‌ನಲ್ಲಿ ಮಂಗಳವಾರ(ಜನವರಿ 21) ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 66 ಮಂದಿ ಮೃತಪಟ್ಟಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವರು ತಿಳಿಸಿದ್ದಾರೆ. ದುರಂತದಲ್ಲಿ ಕನಿಷ್ಠ 51 ಜನರು ಗಾಯಗೊಂಡಿದ್ದಾರೆ ಎಂದು ಗೃಹ ಸಚಿವ ಅಲಿ ಯರ್ಲಿಕಾಯಾ ಹೇಳಿದ್ದಾರೆ.

ಘಟನಾ ಸ್ಥಳವನ್ನು ಪರಿಶೀಲಿಸಿದ ನಂತರ ಗೃಹ ಸಚಿವ ಯರ್ಲಿಕಾಯಾ ಈ ಘಟನೆಯಿಂದ ನಮಗೆ ತುಂಬಾ ದುಃಖವಾಗಿದೆ ಎಂದು ತಿಳಿಸಿದರು. ಗಾಯಗೊಂಡವರಲ್ಲಿ ಕನಿಷ್ಠ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವ ಕೆಮಲ್ ಮಾಮಿಸೊಗ್ಲು ತಿಳಿಸಿದ್ದಾರೆ.ಬೋಲು ಪ್ರಾಂತ್ಯದ ಕಾರ್ತಲಕಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಮುಂಜಾನೆ 3:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿವೆ.

ಪ್ರಸ್ತುತ ಹೋಟೆಲ್​ನಲ್ಲಿ ಬೆಂಕಿ ಅವಘಡಕ್ಕೆ ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ. ಘಟನೆಯ ಸಮಯದಲ್ಲಿ ಒಟ್ಟು 234 ಜನರು ಹೋಟೆಲ್‌ನಲ್ಲಿ ತಂಗಿದ್ದರು. ಗಾಬರಿಯಿಂದ ಕಟ್ಟಡದಿಂದ ಜಿಗಿದ ನಂತರ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಅಬ್ದುಲ್ ಅಜೀಜ್ ಐಡಿನ್ ತಿಳಿಸಿದ್ದಾರೆ. ಕೆಲವು ಜನರು ಹಾಳೆಗಳು ಮತ್ತು ಹೊದಿಕೆಗಳನ್ನು ಬಳಸಿ ತಮ್ಮ ಕೊಠಡಿಗಳಿಂದ ಕೆಳಗೆ ಬರಲು ಪ್ರಯತ್ನಿಸಿದರು ಎಂದು ಸ್ಥಳೀಯ ಮಾಧ್ಯಮ ಹೇಳಿದೆ.

ಹೋಟೆಲ್‌ನಲ್ಲಿ ಅಗ್ನಿಶಾಮಕ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿಲ್ಲ. ನನ್ನ ಹೆಂಡತಿಗೆ ಏನೋ ಸುಡುವ ವಾಸನೆ ಬಂದಿತು. ನಂತರ ನಾವು ಎದ್ದು ಓಡಿಹೋದೆವು. ಆದರೆ ಈ ಸಮಯದಲ್ಲಿ ಹೋಟೆಲ್‌ನಲ್ಲಿ ಯಾವುದೇ ಎಚ್ಚರಿಕೆ ನೀಡಲಿಲ್ಲ ಎಂದು ಹೋಟೆಲ್‌ನ ಮೂರನೇ ಮಹಡಿಯಲ್ಲಿ ತಂಗಿದ್ದ ಅಟಕನ್ ಯೆಲ್ಕೋವನ್ ಎಂಬ ವ್ಯಕ್ತಿ ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕಾರ್ತಲಕಯಾ ಇಸ್ತಾನ್‌ಬುಲ್‌ನಿಂದ ಪೂರ್ವಕ್ಕೆ ಸುಮಾರು 300 ಕಿಲೋಮೀಟರ್ (186 ಮೈಲಿ) ದೂರದಲ್ಲಿರುವ ಕೊರೊಗ್ಲು ಪರ್ವತಗಳಲ್ಲಿನ ಜನಪ್ರಿಯ ಸ್ಕೀ ರೆಸಾರ್ಟ್ ಆಗಿದೆ. ಅಗ್ನಿ ದುರಂತದ ನಡೆದ ಬಳಿಕ ಸ್ಥಳಕ್ಕೆ 30 ಅಗ್ನಿಶಾಮಕ ವಾಹನಗಳು ಮತ್ತು 28 ಆಂಬುಲೆನ್ಸ್‌ಗಳನ್ನು ಕಾರ್ಯಾಚರಣೆಗೆ ಕಳುಹಿಸಲಾಗಿತ್ತು. (ಏಜೆನ್ಸೀಸ್​​)