ನ್ಯೂಸ್

ಕೃಷಿ ಸಿಂಚಾಯಿಗೆ 642 ಕೋಟಿ ರೂ. ಮಂಜೂರು; ಬಿ.ಸಿ. ಪಾಟೀಲ್

ಬೆಂಗಳೂರು: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 642.26 ಕೋಟಿ ರೂ. ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.

ಸಂಕ್ರಾಂತಿ ಹಬ್ಬಕ್ಕೆ ರೈತರಿಗೆ ಇದು ಸಿಹಿ ಸುದ್ದಿಯಾಗಿದೆ. ಯೋಜನೆಯಡಿ ಕೇಂದ್ರದಿಂದ ಶೇ.60 ರಾಜ್ಯದಿಂದ ಶೇ.40ರ ಅನುಪಾತದಲ್ಲಿ ವೆಚ್ಚ ಭರಿಸಲಾಗುತ್ತಿದೆ. ರಾಜ್ಯದ 2.75 ಲಕ್ಷ ಹೆ. ಮಳೆಯಾಶ್ರಿತ ಪ್ರದೇಶವನ್ನು ಉಪಚರಿಸಲು ಅನುಮೋದನೆ ನೀಡಲಾಗಿದೆ. ಸಮತಟ್ಟಾದ ಪ್ರದೇಶದ ಪ್ರತಿ ಹೆಕ್ಟೇರ್ ಜಲಾನಯಗಳ ಉಪಚಾರಕ್ಕೆ 22 ಸಾವಿರ ರೂ., ಗುಡ್ಡಗಾಡು ಪ್ರದೇಶದ ಉಪಚಾರಕ್ಕೆ 28 ಸಾವಿರ ರೂ.ವರೆಗೆ ಅನುದಾನ ಲಭ್ಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಳೆ ನೀರು ಕೊಯ್ಲ ಮೂಲಕ ಮಣ್ಣಿನ ತೇವಾಂಶ ಸಂರಕ್ಷಣೆ, ಪರ್ಯಾಯ ಬೆಳೆ ವ್ಯವಸ್ಥೆಗಳು, ಹವಾಮಾನ ವೈಪರೀತ್ಯ ಮತ್ತು ಬರಗಾಲದ ಅಪಾಯಗಳನ್ನು ಎದುರಿಸುವುದು ಕೃಷಿ ಸಿಂಚಾಯಿ ಮೂಲ ಉದ್ದೇಶವಾಗಿದೆ.

600 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ: ಸುಜಲ-ಜಿಜಿಜಿ ಯೋಜನೆ ಮಾದರಿಯಲ್ಲಿ ವಿಶ್ವಬ್ಯಾಂಕ್ ನೆರವಿನಲ್ಲಿ ಹೊಸ ರಿವಾರ್ಡ್ ಕೃಷಿಯ ಸುಸ್ಥಿರತೆಗಾಗಿ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ ಯೋಜನೆ ಜಾರಿಗೊಳಿಸಿ, 21 ಜಿಲ್ಲೆಗಳಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಮುಂದಿನ 5 ವರ್ಷಗಳ ಕಾಲ ಅನುಷ್ಠಾನಗೊಳಿಸಲಾಗಿದೆ ಎಂದು ಪಾಟೀಲ್ ತಿಳಿಸಿದರು.

ಲೈಟ್​ಹೌಸ್ ಹೆಮ್ಮೆ ನಮ್ಮದು: ದೇಶದಲ್ಲೇ ಕರ್ನಾಟಕ ಜಲಾನಯನ ಮತ್ತು ಕೃಷಿ ವಿಚಾರದಲ್ಲಿ ತಾಂತ್ರಿಕ ಸಲಹೆ ನೀಡಲು ಮಾದರಿಯಾಗಿದ್ದು, ರಾಜ್ಯವನ್ನು ಕೇಂದ್ರ ಸರ್ಕಾರ ಲೈಟ್​ಹೌಸ್ ಎಂದು ಗುರುತಿಸಿರುವುದು ಕರ್ನಾಟಕ ಹೆಮ್ಮೆ ಎಂದ ಪಾಟೀಲ್, ರಾಜ್ಯದ 14 ಲಕ್ಷ ಹೆ. ಪ್ರದೇಶದಲ್ಲಿ 11 ಜಿಲ್ಲೆಗಳಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಕಾರ್ಡ್ ವಿತರಿಸಲಾಗಿದೆ. ಪ್ರಸ್ತುತ ಹೊಸ ದಾಗಿ 9 ಜಿಲ್ಲೆಗಳು ಸೇರಿ 19.41 ಲಕ್ಷ ಹೆ. ಮಳೆಯಾಶ್ರಿತ ಪ್ರದೇಶದಲ್ಲಿ ಭೂ ಸಂಪನ್ಮೂಲ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು. ಪ್ರಸಕ್ತ ಸಾಲಿನಲ್ಲಿ 250 ಅಮೃತ ರೈತ ಉತ್ಪಾದಕರ ಸಂಸ್ಥೆ ಗಳನ್ನು ರಚಿಸುವ ಗುರಿ ಹೊಂದಿದ್ದು, ಈವರೆಗೆ 178 ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದರು.