ನ್ಯೂಸ್

60 ಕೋಟಿ ರೂಪಾಯಿ ವಂಚನೆ ಪ್ರಕರಣ; ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಲುಕ್ ಔಟ್ ನೋಟಿಸ್ ಜಾರಿ| lookout

ಮುಂಬೈ ;60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಇಂದು (ಸೆ.05) ಲುಕ್ ಔಟ್ ಸರ್ಕ್ಯುಲರ್ (ಎಲ್‌ಒಸಿ) ಹೊರಡಿಸಿದ್ದಾರೆ.

ದಂಪತಿಗಳು ಆಗಾಗ್ಗೆ ಅಂತರರಾಷ್ಟ್ರೀಯ ಪ್ರವಾಸಗಳನ್ನು ಮಾಡುವುದರಿಂದ ನಗರ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಈ ಸುತ್ತೋಲೆಯನ್ನು ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಉದ್ಯಮಿಯೊಬ್ಬರಿಗೆ ಸುಮಾರು 60 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ಆಗಸ್ಟ್ 14 ರಂದು ಜುಹು ಪೊಲೀಸ್ ಠಾಣೆಯಲ್ಲಿ ನಟಿ ಮತ್ತು ಅವರ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಉದ್ಯಮಿ ದೀಪಕ್ ಕೋಠಾರಿ ಎಂಬುವವರು ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಉದ್ಯಮ ವಿಸ್ತರಿಸುವ ಸಂಬಂಧ ಹಣ ಪಡೆದಿದ್ದರು. 2015 ಮತ್ತು 2023 ರ ಅವಧಿಯಲ್ಲಿ ಸ್ಟಾರ್ ಜೋಡಿ ನನ್ನ ಬಳಿ 60 ಕೋಟಿ ರೂ. ಹಣವನ್ನು ಪಡೆದುಕೊಂಡಿದೆ. ಆದರೆ ನಾನು ನೀಡಿದ್ದ ಹಣವನ್ನು ವೈಯಕ್ತಿಕ ಬಳಕೆಗೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಲುಕ್ಔಟ್ ಸುತ್ತೋಲೆ ಎಂದರೇನು?

ಲುಕ್ ಔಟ್ ಸರ್ಕ್ಯುಲರ್ (LOC) ಎಂಬುದು ದೇಶವನ್ನು ತೊರೆಯುವುದನ್ನು ತಡೆಯಲು ಅಥವಾ ಅವರ ಚಲನವಲನಗಳನ್ನು ಟ್ರ್ಯಾಕ್ ಮಾಡಲು ಬಳಸಲಾಗುವ ಸೂಚನೆಯಾಗಿದೆ. ಇದು ವಲಸೆ ಮತ್ತು ಗಡಿ ಅಧಿಕಾರಿಗಳಿಗೆ ಆ ವ್ಯಕ್ತಿಯನ್ನು ಗಮನಿಸುವಂತೆ ಎಚ್ಚರಿಸುತ್ತದೆ.

(ಏಜೆನ್ಸೀಸ್)