ನ್ಯೂಸ್

ತಂಪು ಪಾನೀಯ ತುಂಬಿದ್ದ ಟ್ರಕ್ ಜೀಪಿನ ಮೇಲೆ ಪಲ್ಟಿ: 6 ಸಾವು, 11 ಮಂದಿಗೆ ಗಾಯ

ದೌಸಾ: ಭೀಕರ ಅಪಘಾತವೊಂದರಲ್ಲಿ ಕನಿಷ್ಠ ಆರು ಜನರು ಮೃತಪಟ್ಟು, 11 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.

ಮೃತರು ಮತ್ತು ಗಾಯಾಳುಗಳ ಇನ್ನು ಪತ್ತೆಯಾಗಿಲ್ಲ. ಅಲ್ವಾರ್‌ನಿಂದ ತಂಪು ಪಾನೀಯ ತುಂಬಿದ ಟ್ರಕ್ ಬರುತ್ತಿತ್ತು. ಜೀಪ್ ಮಾಹ್ವಾದಿಂದ ಮಾಂದವಾರಕ್ಕೆ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿತ್ತು. ಈ ಮಧ್ಯೆ, ಮಾಹ್ವಾ-ಅಲ್ವಾರ್ ರಾಜ್ಯ ಹೆದ್ದಾರಿಯ ಉಕ್ರುಂಡ್ ಗ್ರಾಮದ ಬಳಿ ಹಡ್ಲಾ ಪೆಟ್ರೋಲ್ ಪಂಪ್ ಬಳಿ ತಂಪು ಪಾನೀಯ ತುಂಬಿದ ಟ್ರಕ್ ಪ್ರಯಾಣಿಕರು ತುಂಬಿದ್ದ ಜೀಪ್‌ಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಜಾಮೀನು ತಿರಸ್ಕೃತಗೊಂಡರೂ ಜೈಲಿನಿಂದ ಹೊರಬಂದ ಆರೋಪಿ: ಕುಟುಂಬಸ್ಥರು-ಲಾಯರ್​ ಕಂಗಾಲು, ಇದರಲ್ಲಿತ್ತು ‘ಅವರ’ ಕೈವಾಡ..

ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಡಿಕ್ಕಿಯ ನಂತರ ತಂಪು ಪಾನೀಯ ತುಂಬಿದ ಟ್ರಕ್ ಜೀಪಿನ ಮೇಲೆ ಪಲ್ಟಿಯಾಗಿದ್ದು, 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೀಪಿನಲ್ಲಿ ಹಲವು ದೇಹಗಳು ಸಿಲುಕಿಕೊಂಡಿದ್ದು, ಜನರ ಚೀರಾಟ ಕೇಳಿ ಸ್ಥಳೀಯರು ಸ್ಥಳಕ್ಕಾಗಮಿಸಿ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಅಪಘಾತದಲ್ಲಿ ಗಾಯಗೊಂಡವರನ್ನು ಮಾಹ್ವಾ ಮತ್ತು ಮಂದಾವರ್‌ನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ವೇಳೆ ಮತ್ತೆ ಇಬ್ಬರು ಸತ್ತಿದ್ದಾರೆ. ಇನ್ನು, ಗಂಭೀರವಾಗಿ ಗಾಯಗೊಂಡ 4 ಮಂದಿಯನ್ನು ಜೈಪುರಕ್ಕೆ ರವಾನಿಸಲಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ.(ಏಜೆನ್ಸೀಸ್)