ನ್ಯೂಸ್

ಎರಡು ಬಸ್​ ನಡುವೆ ಮುಖಾಮುಖಿ ಡಿಕ್ಕಿ: 6 ಸಾವು, 10ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರ

ಲಖನೌ: ಬುಧವಾರ ಬೆಳಗ್ಗೆ ಎರಡು ಬಸ್​ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆರು ಮಂದಿ ಪ್ರಯಾಣಿಕರು ದಾರುಣವಾಗಿ ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶ ರಾಜಧಾನಿ ಲಖನೌ ಹೊರವಲಯದಲ್ಲಿ ಅಪಘಾತ ಸಂಭವಿಸಿದ್ದು, ಎರಡು ಬಸ್​ಗಳು ಕೂಡ ಸರ್ಕಾರಿ ಸಾರಿಗೆ ಸಂಸ್ಥೆಗೆ ಸೇರಿದ್ದಾಗಿವೆ. ಕಕೊರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಲಖನೌ-ಹರ್ದೋಯ್​ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿರುವುದಾಗಿ ಎಸಿಪಿ ಎಸ್​.ಎಂ ಕಾಸಿಮ್​ ಅಬ್ದಿ ಹೇಳಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸುಗಳು​ ಓವರ್​ಟೇಕ್​ ಮಾಡಲು ಯತ್ನಿಸಿ ಮುಖಾಮುಖಿ ಡಿಕ್ಕಿಯಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇನ್ನು ಘಟನೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೇಸರ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಮೂವರು ಸದಸ್ಯರ ಸಮಿತಿಯನ್ನು ರಚಿಸಿರುವ ಹೆದ್ದಾರಿ ಪ್ರಾಧಿಕಾರ ಘಟನೆಯ ಕುರಿತು ತನಿಖೆ ಮಾಡಿ 24 ಗಂಟೆಯೊಳಗೆ ವರದಿ ನೀಡುವಂತೆ ಸೂಚಿಸಿದೆ. (ಏಜೆನ್ಸೀಸ್​)