ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವನ್ಯಜೀವಿಗಳು ಮತ್ತು ಅದರ ಕಲಾಕೃತಿಗಳ ಮಾರಾಟಕ್ಕೆ ಯತ್ನಿಸುತ್ತಿದ್ದ 6 ಮಂದಿಯನ್ನು ಪ್ರತ್ಯೇಕ ಕೇಸಿನಲ್ಲಿ ಸಿಐಡಿ ಅರಣ್ಯ ಘಟಕ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರದ ಸಿದ್ಧನಹೊಸಹಳ್ಳಿಯ ರಾಕೇಶ್ ಅಲಿಯಾಸ್ ರಾಕಿ, ರಘುನಂದನ್ ಅಲಿಯಾಸ್ ರಘು, ರಾಜಸ್ಥಾನದ ಲೋಕೇಶ್ ಜಾದು, ಮನಮನೋಹನ್ ಸಿಂಗ್ ಚೌಹಾಣ್, ಗುಲಾಬ್ ಚಂದ್ ಪ್ರಜಾಪತ್ ಮತ್ತು ಮಹಾರಾಷ್ಟ್ರದ ದಿನೇಶ್ ಬಾಳಸಾಹೇಬ್ ಬಂಧಿತರು.
ನೆಲಮಂಗಲ ಮತ್ತು ಮೆಜೆಸ್ಟಿಕ್ ಸಮೀಪ ಗಿಳಿಗಳು, ಆನೆ ದಂತ ಮಾರಾಟಕ್ಕೆ 2 ತಂಡಗಳು ಪ್ರತ್ಯೇಕವಾಗಿ ಯತ್ನಿಸಿರುವ ಬಗ್ಗೆ ಮಾಹಿತಿ ಪಡೆದು ಎಡಿಜಿಪಿ ಕೆ.ವಿ.ಶರತ್ ಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ರವಿಶಂಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಕಂಪನಿ ನೌಕರ ರಾಕೇಶ್ ಮತ್ತು ರಘುನಂದನ್, ಸುಲಭವಾಗಿ ಹಣ ಗಳಿಸುವ ಗಿಳಿ ಮಾರಾಟ ದಂಧೆ ಶುರು ಮಾಡಿದ್ದರು. ಮಾಗಡಿ ರಸ್ತೆಯ ಗೊಲ್ಲರಹಳ್ಳಿ ವ್ಯಕ್ತಿಯಿಂದ ತಲಾ 3 ಸಾವಿರ ರೂ. ಗೆ ಅಲೆಕ್ಯಾಂಡ್ರಿಯನ್ ಪ್ಯಾರಾಕಿಟ್ ಗಿಳಿಗಳನ್ನು ಖರೀದಿಸಿ 4500 ರೂ.ಗೆ ಮಾರುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದು ನೆಲಮಂಗಲ-ಕುಣಿಗಲ್ ಬೈಪಾಸ್ ರಸ್ತೆ ಬಳಿ ರಾಕೇಶ್ ಹಾಗೂ ರಘುನಂದ್‌ನನ್ನು ಬಂಧಿಸಲಾಯಿತು. ತಪ್ಪಿಸಿಕೊಂಡಿರುವ ಗಿಳಿಗಳ ಪೂರೈಕೆದಾರನ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.