ನ್ಯೂಸ್

ಭಾರತದಲ್ಲಿ 59 ಆ್ಯಪ್‌ ನಿಷೇಧ- ಚೀನಾದ ಪ್ರತಿಕ್ರಿಯೆ ಏನು ಗೊತ್ತಾ?

ಬೀಜಿಂಗ್‌: ಭಾರತದ ವಿರುದ್ಧ ಸಂಘರ್ಷಕ್ಕೆ ಇಳಿದು ತಲೆ ಮೇಲೆ ಕಲ್ಲು ಹಾಕಿಕೊಂಡಿರುವ ಚೀನಾ, ಇದೀಗ ಭಾರತದಲ್ಲಿ 59 ಆ್ಯಪ್‌ಗಳನ್ನು ಬ್ಯಾನ್‌ ಮಾಡಿದ್ದರಿಂದ ಅಕ್ಷರಶಃ ತತ್ತರಿಸಿ ಹೋಗಿದೆ.

ಟಿಕ್‌ಟಾಕ್‌ ಒಂದರಿಂದಲೇ ಸಹಸ್ರಾರು ಕೋಟಿ ರೂಪಾಯಿಗಳನ್ನು ಎಣಿಸುತ್ತಿದ್ದ ಚೀನಾಕ್ಕೆ ಇದೀಗ ಭಾರಿ ಆಘಾತವೇ ಉಂಟಾಗಿದೆ.

ಚೀನಾದ ಆ್ಯಪ್‌ಗಳನ್ನು ನಿಷೇಧಿಸುವ ಸಂಬಂಧ ನಿನ್ನೆ ಸಂಜೆ ಭಾರತ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಚೀನಾ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ಹೂಡಿಕೆದಾರರ ಕಾನೂನು ಹಕ್ಕುಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಭಾರತ ಸರ್ಕಾರಕ್ಕೆ ಇದೆ. ಎಲ್ಲಾ ದೇಶಗಳ ಹಕ್ಕುಗಳನ್ನು ಭಾರತ ಎತ್ತಿಹಿಡಿಯಬೇಕಿದೆ. ಚೀನಾ ದೇಶ ಕೂಡ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ 59 ಆ್ಯಪ್‌ಗಳನ್ನು ನಿಷೇಧಿಸುವ ಕುರಿತು ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಕುರಿತಂತೆ ನಾವು ಪರಿಶೀಲಿಸುತ್ತಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಝಿಯಾನ್‌ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಆ್ಯಪ್‌ ಬ್ಯಾನ್‌ ಕುರಿತು ಮಾತನಾಡಿದ ಝಾವೊ, ಚೀನಾ ಸದಾ ಅಂತಾರಾಷ್ಟ್ರೀಯ ಕಾನೂನನ್ನು ಕಾಪಾಡುವಲ್ಲಿ ಮುಂದಿದೆ. ಅದರಂತೆ ಚೀನಾ ಸದಾ ನಡೆದುಕೊಳ್ಳುತ್ತದೆ. ಭಾರತ ಕೂಡ ಇದನ್ನು ಪಾಲನೆ ಮಾಡಬೇಕಿದೆ ಎಂದಿದ್ದಾರೆ!

ಈ ಮೂಲಕ ಆ್ಯಪ್‌ ಬ್ಯಾನ್‌ನಿಂದ ಚೀನಾ ಎಷ್ಟೊಂದು ನೊಂದುಕೊಂಡಿದೆ ಎಂಬುದನ್ನು ಪರೋಕ್ಷವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ!