ಸೂರತ್: ಕರ್ನಾಟಕದ ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ ಬೆಳದಿಂಗಳ ಬಾಲೆ ಸಿನಿಮಾ ನೀವು ನೋಡಿರಬಹುದು. ನಾಯಕ ನಟ ಅನಂತ್ನಾಗ್ಗೆ ಪದೇಪದೆ ಕರೆ ಮಾಡುವ ಬೆಳದಿಂಗಳ ಬಾಲೆ, ತಾನು ಯಾರು ಎಂಬುದನ್ನು ಪತ್ತೆ ಮಾಡು ಎಂದು ಹೇಳುತ್ತಾಳೆ. ಆದರೆ ಈ ಸುದ್ದಿಯ ಬೆಳದಿಂಗಳ ಬಾಲೆ ನಾಲ್ಕು ಬೇರೆ ಬೇರೆ ಹೆಸರುಗಳಲ್ಲಿ ಪರಿಚಯ ಮಾಡಿಕೊಂಡು ಸುಮಾರು ಹತ್ತು ವರ್ಷ ಮಾತನಾಡಿದ್ದಾಳೆ, ಒಮ್ಮೆಯೂ ಭೇಟಿಯಾಗಿಲ್ಲ.
ಈ ಪೋನ್ ಪ್ರಣಯಕ್ಕೆ ನಾಯಕ ಕಳೆದುಕೊಂಡಿದ್ದು 4 ಕೋಟಿ ರೂ.! ಅಂದ ಹಾಗೆ ಈ ಬೆಳದಿಂಗಳ ಬಾಲೆ ಪರಿಚಯ ಆಗುವ ಸಮಯದಲ್ಲಿ ಕೋಟ್ಯಧಿಪತಿಯಾಗಿದ್ದ ಈ ವ್ಯಕ್ತಿ ಈಗ ಬರಿಗೈ ದಾಸ. ಕತೆ ತುಂಬಾ ಇಂಟರೆಸ್ಟಿಂಗ್ ಇದೆ. 2012ರಲ್ಲಿ ತನ್ನ ಒಡೆತನದಲ್ಲಿದ್ದ ಜಮೀನನ್ನು ಮಾರಾಟ ಮಾಡಿ ದೊಡ್ಡ ಮೊತ್ತವನ್ನೇ ಗಳಿಸಿದ್ದ ಮುಕೇಶ್ ದೇಸಾಯಿ ತುಂಬಾ ವೈಭವೋಪೇತ ಬದುಕು ರೂಢಿಸಿಕೊಂಡಿದ್ದ.
ಇದೇ ಸಮಯದಲ್ಲಿ (2013ರಲ್ಲಿ) ಅವರಿಗೆ ಒಂದು ಮಿಸ್ ಕಾಲ್ ಬರುತ್ತದೆ. ಈ ಕರೆಯನ್ನು ಅವರು ಅಟೆಂಡ್ ಮಾಡುತ್ತಾರೆ. ಈ ರೀತಿ, ಮುಕೇಶ್ ಬದುಕಿನಲ್ಲಿ ಬೆಳದಿಂಗಳ ಬಾಲೆಯ ಪ್ರವೇಶವಾಗುತ್ತದೆ. ಒಬ್ಬಳೇ ನಾಲ್ವರು ಬೇರೆ ಬೇರೆ ಹೆಸರಿನಲ್ಲಿ ಪರಿಚಯ ಮಾಡಿಕೊಳ್ಳುತ್ತಾಳೆ. ನಾಲ್ವರು ಬೆಳದಿಂಗಳ ಬಾಲೆಯರ ಮಾತು ಗಳಿಗೆ ಮುಕೇಶ್ ಮನಸೋತು ಹೋಗುತ್ತಾರೆ. ನಾಲ್ವರೂ ಮುಕೇಶ್ ನಿಂದ ಸತತವಾಗಿ ಹಣ ದೋಚುತ್ತಾರೆ.
ಆರ್ಥಿಕವಾಗಿ ಸಂಕಷ್ಟ ಸ್ಥಿತಿ ಎದುರಾದಾಗ ಮುಕೇಶ್ ನಾನು ಇದುವರೆಗೆ ಕೊಟ್ಟ ಹಣ ವಾಪಸ್ ಕೊಡು ಎಂದು ಬೆಳದಿಂಗಳ ಬಾಲೆಗೆ ಕೇಳಿದ್ದಾರೆ. ದುಡ್ಡು ವಾಪಸ್ ಕೇಳಿದ್ದಕ್ಕೆ ಸುಲಿಗೆ ಹಾಗೂ ಅತ್ಯಾಚಾರದ ಕೇಸ್ ಬೆದರಿಕೆ ಹಾಕಿದ್ದಾಳೆ. ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಲ್ಲದೆ ಯುವತಿಯ ಕಾಟವನ್ನು ತಾಳಲಾರದ ದೇಸಾಯಿ ಕೊನೆಗೂ ಆಕೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ನಿಮಗೂ ಇಂಥ ಮಿಸ್ ಕಾಲ್ ಬರಬಹುದು.