ಚೆನ್ನೈ: ಸಾಮಾನ್ಯವಾಗಿ ಮದುವೆ ಆಗುವಾಗ ಜೀವನ ಸಂಗಾತಿಗಳ ನಡುವಿನ ವಯಸ್ಸು ತುಂಬಾ ಅಂತರ ಇರಬಾರದು ಎಂದು ಬಯಸುತ್ತಾರೆ. ಆದರೆ, ಇಲ್ಲೊಂದು ಜೋಡಿಯ ವಯಸ್ಸಿನ ಅಂತರದ ಬಗ್ಗೆ ತಿಳಿದರೆ ನೀವು ನಿಜಕ್ಕೂ ಅಚ್ಚರಿ ಪಡ್ತೀರಾ! ಏಕೆಂದರೆ, ಇಬ್ಬರ ನಡುವೆ 30 ವರ್ಷ ವಯಸ್ಸಿನ ಅಂತರವಿದೆ. ಇಬ್ಬರು ಮದುವೆ ಆಗಿದ್ದು, ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ಯುವತಿ ವಿಮಲಾಗೆ 24 ವರ್ಷ. ಆಕೆ ಮದುವೆ ಆಗಿರುವ ಕೃಷ್ಣನ್ ಎಂಬುವರ ವಯಸ್ಸು 54 ವರ್ಷ. ತಮಿಳುನಾಡಿನ ಸೇಲಂ ಜಿಲ್ಲೆಯ ಮಟ್ಟಾಯಂಪಟ್ಟಿ ಏರಿಯಾದ ಕೃಷ್ಣನ್, ನೇಕಾರ ವೃತ್ತಿ ಮಾಡುತ್ತಿದ್ದಾರೆ. ಈಗಾಗಲೇ ಅವರಿಗೆ ಮದುವೆಯಾಗಿದ್ದು, 10 ವರ್ಷಗಳ ಹಿಂದೆಯೇ ಪತ್ನಿಯಿಂದ ದೂರವಾಗಿದ್ದಾರೆ.
ಅದೇ ಏರಿಯಾದ ವಿಮಲಾ ಪದವೀಧರೆಯಾಗಿದ್ದು, ಕೃಷ್ಣನ್ ಜತೆಗಿನ ಪರಿಚಯ, ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ಬದಲಾಗಿ ಅಂತಿಮವಾಗಿ ಇಬ್ಬರು ಮದುವೆ ಎಂಬ ಬಂಧನದಲ್ಲಿ ಒಂದಾಗಿದ್ದಾರೆ. ವಿಮಲಾ ಆಗಾಗ ಕೃಷ್ಣನ್ ಅವರ ಮನೆಗೆ ಭೇಟಿ ನೀಡುತ್ತಿದ್ದಳು. ವಯಸ್ಸಿನಲ್ಲಿ ತನಗಿಂತ 30 ವರ್ಷ ದೊಡ್ಡವರು ಎಂಬುದು ಗೊತ್ತಿದ್ದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಕೃಷ್ಣನ್ ಅವರ ಪ್ರೀತಿಗೆ ಆಕರ್ಷಣೆಗೊಂಡಳು.
ಇಬ್ಬರ ಪ್ರೀತಿ ಗಟ್ಟಿಯಾದಂತೆ ಒಬ್ಬರನೊಬ್ಬರು ಬಿಟ್ಟು ಇರಲಾಗದೇ ಓಡಿ ಹೋಗಿ ತಿರುವಣಮಲೈ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ವಿಚಾರ ವಿಮಲಾ ಅವರ ಮನೆಗೆ ಗೊತ್ತಾಗುತ್ತಿದ್ದಂತೆ ತಮ್ಮ ಮಗಳನ್ನು ಅಪಹರಿಸಿ, ಬಲವಂತವಾಗಿ ಮದುವೆ ಆಗಿದ್ದಾನೆ ಎಂದು ಕೃಷ್ಣನ್ ವಿರುದ್ಧ ವಿಮಲಾ ತಂದೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಕೃಷ್ಣನ್ ಮತ್ತು ವಿಮಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿ ರಕ್ಷಣೆ ಕೋರಿದರು.
ಎಷ್ಟೇ ಮನವೊಲಿಸಿದರೂ ಯುವತಿ ತನ್ನ ಪಾಲಕರೊಂದಿಗೆ ಹೋಗಲು ನಿರಾಕರಿಸಿದಳು. ಆಕೆಗೆ ಮದುವೆಯ ವಯಸ್ಸಾಗಿದ್ದು, ಸ್ವಂತ ನಿರ್ಧಾರ ತೆಗೆದುಕೊಳ್ಳಲು ಶಕ್ತಳಾಗಿರುವುದರಿಂದ ಆಕೆಯ ಇಚ್ಛೆಯಂತೆ ಕೃಷ್ಣನ್ ಜತೆ ಕಳುಹಿಸಲಾಯಿತು. (ಏಜೆನ್ಸೀಸ್)