ನವದೆಹಲಿ: ಭಾರತದಲ್ಲಿ ಕರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದು, ಸೋಂಕಿನ ಪ್ರಕರಣಗಳ ಹೆಚ್ಚಳದ ಜತೆಗೆ ಸಾವಿನ ಪ್ರಮಾಣವೂ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವಡೆ ಲಾಕ್ಡೌನ್, ಕೆಲವು ನಿರ್ಬಂಧಗಳನ್ನು ಹೇರಲಾಗಿದ್ದು, ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಅದೇನೆಂದರೆ.. ಏಪ್ರಿಲ್ 15ರೊಳಗೆ ಭಾರತದಲ್ಲಿ ಕೋವಿಡ್ನಿಂದಾಗಿ 50 ಸಾವಿರ ಮಂದಿ ಸಾವಿಗೀಡಾಗಲಿದ್ದಾರೆ. ಅದರಲ್ಲೂ ಇಂಥದ್ದೊಂದು ಎಚ್ಚರಿಕೆಯನ್ನೂ ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಬಂಧ ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರತಿಕ್ರಿಯಿಸಿ ಸ್ಪಷ್ಟನೆಯನ್ನು ನೀಡಿದೆ.
ಭಾರತದಲ್ಲಿ ಏ. 15ರೊಳಗೆ 50 ಸಾವಿರ ಮಂದಿ ಕೋವಿಡ್-19ನಿಂದಾಗಿ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಲ್ಲ. ಅದು ಸುಳ್ಳು ಸುದ್ದಿ, ಅಂಥದ್ದೊಂದು ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸ್ಪಷ್ಟನೆ ನೀಡಿದೆ. ಭಾರತದಲ್ಲಿ ಇರುವರೆಗೆ 1,26,86,049 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಕರೊನಾದಿಂದಾಗಿ ಸತ್ತವರ ಸಂಖ್ಯೆ 1,65,547 ಏರಿದೆ ಎಂದು ಅದು ತಿಳಿಸಿದೆ. (ಏಜೆನ್ಸೀಸ್)