ಸಾಂದರ್ಭಿಕ ಚಿತ್ರ 
ನ್ಯೂಸ್

ಒಳನುಸುಳುವ ಯತ್ನ: ಜಮ್ಮು ಕಾಶ್ಮೀರದಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಒಳನುಸುಳುವಿಕೆ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಸೆದೆಬಡಿದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿರುವ ಗಡಿ ನಿಯಂತ್ರಣ ರೇಖೆಯ ಬಳಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಉತ್ತರ ಕಾಶ್ಮೀರ ಜಿಲ್ಲೆಯ ಎಲ್‌ಒಸಿ ಬಳಿಯ ಜುಮಗುಂಡ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ ಗುರುವಾರ ರಾತ್ರಿ ಕಾಶ್ಮೀರದ ಪೊಲೀಸರು ಮತ್ತು ಸೇನಾ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಈ ಮಾಹಿತಿಯನ್ನು ಕಾಶ್ಮೀರದ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕರಾದ ವಿಜಯ್​ ಕುಮಾರ್​ ಖಚಿತ ಪಡಿಸಿದ್ದಾರೆ.

ಸ್ಥಳದಲ್ಲಿ ಈಗಲೂ ಸೇನಾ ಕಾರ್ಯಾಚರಣೆ ಮುಂದುವರಿದಿದೆ. ಇತ್ತೀಚಗೆ ಉಗ್ರರ ಒಳನುಸುಳುವಿಕೆ ಹೆಚ್ಚಾಗುತ್ತಿದ್ದು, ಈಗಾಗಲೇ ಸರಣಿ ಯತ್ನವನ್ನು ಸೇನಾ ಪಡೆಗಳು ವಿಫಲಗೊಳಿಸಿದ್ದಾರೆ. ನಿನ್ನೆಯಷ್ಟೇ ಪೂಂಚ್​ ಸೆಕ್ಟರ್​ನಲ್ಲಿ ಒಳನುಸುಳುವಿಕೆಯನ್ನು ತಡೆಯಲಾಗಿತ್ತು.

ಫೆಬ್ರವರಿಯಿಂದ ಗಡಿ ನಿಯಂತ್ರಣ ರೇಖೆಯ ಬಳಿ 10 ಪ್ರಮುಖ ಒಳನುಸುಳುವಿಕೆಯ ಯತ್ನವನ್ನು ಸೇನಾ ಪಡೆಗಳು ವಿಫಲಗೊಳಿಸಿವೆ. ಆದಾಗ್ಯ ತನ್ನ ನರಿಬುದ್ದಿಯನ್ನು ಬಿಡದ ಪಾಕ್ ತನ್ನ ಉಗ್ರರನ್ನು ಭಾರತದ ಒಳಗಡೆ ಕಳುಹಿಸುವ ಯತ್ನದಲ್ಲಿ ತೊಡಗಿದೆ. (ಏಜೆನ್ಸೀಸ್​)