ನ್ಯೂಸ್

ನದಿ ದಾಟುತ್ತಿದ್ದ ವೇಳೆ T-72 ಟ್ಯಾಂಕರ್​ ಮುಳುಗಡೆ; ಸೇನೆಯ ಐದು ಯೋಧರು ಸಾವು

ಲಡಾಖ್​: ಭಾರತ-ಚೀನಾ ಗಡಿ ಭಾಗದಲ್ಲಿರುವ ಬೇಗ್​ ಓಲ್ಡಿ ಪ್ರದೇಶದಲ್ಲಿ ನದಿ ದಾಟುತ್ತಿರುವಾಗ ಸೇನಾ ಟ್ಯಾಂಕರ್​ ಮುಳುಗಿದ ಪರಿಣಾಮ ಐವರು ಯೋಧರು ಮೃತಪಟ್ಟಿದ್ದಾರೆ. ಈ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶನಿವಾರ (ಜೂನ್ 29) ಮುಂಜಾನೆ ಈ ಘಟನೆ ನಡೆದಿದ್ದು, ಟಿ -72 ಟ್ಯಾಂಕ್‌ನಲ್ಲಿ ಲಡಾಖ್‌ನ ಸಾಸರ್ ಬ್ರಂಗ್ಸಾ ಬಳಿಯ ಶ್ಯೋಕ್ ನದಿಯನ್ನು ದಾಟುತ್ತಿದ್ದ ವೇಳೆ ನೀರಿನ ಮಟ್ಟದಲ್ಲಿ ಏರಿಕೆ ಕಂಡ ಪರಿಣಾಮ ಸೇನಾ ಟ್ಯಾಂಕ್​ ಮುಳುಗಿತು. ಯೋಧರು ತರಬೇತಿಯ ಭಾಗವಾಗಿ ನದಿಯನ್ನು ತಮ್ಮ ಟ್ಯಾಂಕ್‌ನಲ್ಲಿ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎಂದು ಭಾರತೀಯ ಸೇನೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಿಳಿಸಿದೆ.

ಘಟನೆ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ದೇಶಕ್ಕೆ ನಮ್ಮ ಧೀರ ಸೈನಿಕರ ಆದರ್ಶಪ್ರಾಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಗಲಿದ ಕುಟುಂಬಗಳಿಗೆ ನನ್ನ  ಸಂತಾಪ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ದೃಢವಾಗಿ ನಿಂತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.