ನರಸಿಂಗ್ಪುರ: ಈಗೆರಡು ದಿನಗಳ ಹಿಂದೆ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಅವರೆಲ್ಲರೂ ಮಧ್ಯಪ್ರದೇಶದವರು ಆಗಿದ್ದರು.
ಈಗ ಮತ್ತೊಂದು ಅಂಥದ್ದೇ ದುರಂತ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ವಲಸೆ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದ ಟ್ರಕ್ ಪಲ್ಟಿಯಾಗಿ ಐವರು ಕಾರ್ಮಿಕರು ಮೃತಪಟ್ಟಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭೋಪಾಲ್ನಿಂದ 200 ಕಿ.ಮೀ.ದೂರದಲ್ಲಿರುವ ನರಸಿಂಗ್ಪುರದಲ್ಲಿ ಈ ದುರ್ಘಟನೆ ನಡೆದಿದೆ. ಹೈದರಾಬಾದ್ನಿಂದ 20 ವಲಸೆ ಕಾರ್ಮಿಕರು ಲಾರಿಯಲ್ಲಿ ಮಧ್ಯಪ್ರದೇಶದ ಝಾನ್ಸಿಗೆ ತೆರಳುತ್ತಿದ್ದರು. ಇದು ಮಾವಿನ ಹಣ್ಣನ್ನು ತುಂಬಿಕೊಂಡ ಲಾರಿಯಾಗಿದ್ದು, ಹೈದರಾಬಾದ್ನಿಂದ ಉತ್ತರ ಪ್ರದೇಶಕ್ಕೆ ಹೋಗುತ್ತಿತ್ತು.
ಗಾಯಗೊಂಡ ವಲಸೆ ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅದರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಲು ಹರಸಾಹಸಪಡುತ್ತಿದ್ದಾರೆ. ಇಂಥ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಅದರ ಮಧ್ಯೆಯೂ ಕೆಲವು ಕಾರ್ಮಿಕರು ಹೀಗೆ ಸಿಕ್ಕಿದ ಲಾರಿ, ವಾಹನ ಹತ್ತಿಕೊಂಡು ತಮ್ಮ ಊರಿಗೆ ತೆರಳುತ್ತಿದ್ದಾರೆ. ಕಾಲ್ನಡಿಗೆಯಲ್ಲೇ ಹೋಗುತ್ತಿದ್ದಾರೆ. (ಏಜೆನ್ಸೀಸ್)