ಬೆಳಗಾವಿ: ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಯಡಿ 3 ತಿಂಗಳವರೆಗೆ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಉಚಿತವಾಗಿ ವಿತರಿಸಲಾಗುವುದು.
ಅಲ್ಲದೆ, ಕರೊನಾ ಭೀತಿ ನಡುವೆಯೂ ಮನೆ ಮನೆಗೆ ಸಿಲಿಂಡರ್ ಪೂರೈಸುತ್ತಿರುವ ಕಾರ್ವಿುಕರಿಗೆ ಸಂಕಷ್ಟ ಸ್ಥಿತಿಯಲ್ಲಿ 5 ಲಕ್ಷ ರೂ. ನೆರವು ನೀಡಲು ಯೋಜನೆ ರೂಪಿಸಲಾಗಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಬಾಗಿಲಿಗೆ ಸಿಲಿಂಡರ್ ತಂದುಕೊಡುವವರೂ ಕರೊನಾ ಭೀತಿಯಲ್ಲೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರೂ ಕರೊನಾ ವಾರಿಯರ್ಸ್ ಆಗಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಕರೊನಾದಿಂದ ಮೃತಪಟ್ಟರೆ 5 ಲಕ್ಷ ರೂ. ನೆರವು ನೀಡಲು ಯೋಜನೆ ರೂಪಿಸಿದೆ ಎಂದರು.
ಸಹಕರಿಸದಿದ್ದರೆ ಚೇತರಿಸಿಕೊಳ್ಳಲು ಸಾಧ್ಯವೇ?: ಕರೊನಾ ಸೋಂಕಿತರು ಚಿಕಿತ್ಸೆ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಾಮಾಜಿಕ ಅಂತರ ಕಾಪಾಡಿಕೊಂಡು ವೈದ್ಯರಿಗೆ ಸಹಕರಿಸದಿದ್ದರೆ ತಮ್ಮ ಜೀವದ ಜತೆಗೆ ಇತರರಿಗೂ ಹಾನಿಯಾಗಲಿದೆ ಎಂಬುದು ಈಗಾಗಲೇ ಅವರಿಗೆ ಮನವರಿಕೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರೆ ತಕ್ಷಣ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.