ನ್ಯೂಸ್

5 ಲಕ್ಷ ಆ್ಯಂಟಿಜನ್ ಟೆಸ್ಟ್ ಕಿಟ್ ಖರೀದಿ, 30 ನಿಮಿಷದಲ್ಲಿ ಕೈಸೇರಲಿದೆ ಕರೊನಾ ಟೆಸ್ಟ್ ವರದಿ!

arunakunigal

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ 5 ಲಕ್ಷ ಆ್ಯಂಟಿಜನ್‌ (ಪ್ರತಿಜನಕ) ಕಿಟ್​ ಖರೀದಿಸಲು ನಿರ್ಧರಿಸಲಾಗಿದೆ‌ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ವಿಧಾನಸೌಧದಲ್ಲಿ ಟಾಸ್ಕ್ ಫೋರ್ಸ್‌ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ ಆ್ಯಂಟಿಜನ್ ಟೆಸ್ಟ್ ಕಿಟ್ ಬಳಕೆಯಿಂದ ಅರ್ಧ ತಾಸಿನಲ್ಲಿ ವರದಿ ಪಡೆಯಬಹುದು. ಹೀಗಾಗಿ ಸೋಂಕು ಹೆಚ್ಚುತ್ತಿರುವ ರಾಜಧಾನಿಯಲ್ಲಿ ಹೆಚ್ಚಿನ ಪ್ರಮಾಣದ ಕಿಟ್​ಗಳನ್ನು ಬಳಸಲಾಗುತ್ತದೆ ಎಂದರು.

ಹೊಸದಾಗಿ ಖರೀದಿಸಲಿರುವ ಆ್ಯಂಟಿಜನ್ ಟೆಸ್ಟ್ ಕಿಟ್​ಗಳ ಪೈಕಿ ಅರ್ಧದಷ್ಟನ್ನು ಬೆಂಗಳೂರಿನಲ್ಲೇ ಬಳಸಿಕೊಳ್ಳಲಾಗುವುದು. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣ ಹಾಗೂ ಮರಣ ಪ್ರಮಾಣ ತಗ್ಗಿಸುವುದಕ್ಕಾಗಿ 50 ವರ್ಷ ಮೇಲ್ಪಟ್ಟವರ ತಪಾಸಣೆ ನಡೆಸಲಿದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ.50 ಜನರ ತಪಾಸಣೆ ನಡೆಸುವ ಚಿಂತನೆಯಿದೆ ಎಂದು ಸಚಿವರು ತಿಳಿಸಿದರು.

ಲಿಖಿತ ಒಪ್ಪಿಗೆ: ಸರ್ಕಾರಕ್ಕೆ ಶೇ.50 ಹಾಸಿಗೆಗಳನ್ನು ಹಸ್ತಾಂತರಿಸುವ ಕುರಿತು ಖಾಸಗಿ ಆಸ್ಪತ್ರೆಯವರು ಲಿಖಿತ ಒಪ್ಪಿಗೆ ಪತ್ರ ಸಲ್ಲಿಸಿದ್ದು, ಸೋಂಕಿತರ ಚಿಕಿತ್ಸೆಗೆ ಸಮಸ್ಯೆ ಆಗುವುದಿಲ್ಲ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.