ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಶನಿವಾರ (ಜುಲೈ 27) ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರು ಮಕ್ಕಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಮದ್ವಾಹ್ ಕಿಶ್ತ್ವಾರ್‌ನಿಂದ ಬರುತ್ತಿದ್ದ ಕಾರು ಕೋಕೆರ್ನಾಗ್‌ನ ದಕ್ಸಮ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಈ ಅಪಘಾತವಾಗಿದೆ.
JK03H9017 ನೋಂದಣಿ ಸಂಖ್ಯೆಯ ವಾಹನವು ಜಮ್ಮು ಪ್ರದೇಶದ ಕಿಶ್ತ್ವಾರ್‌ನಿಂದ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಿಯಂತ್ರಣ ಕಳೆದುಕೊಂಡು ಕಾರು ರಸ್ತೆಯ ಡಾಕ್ಸಮ್ ಬಳಿಯ ಕಂದಕಕ್ಕೆ ಉರುಳಿದೆ. ಈ ಅಪಘಾತದಲ್ಲಿ 5 ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ರಜೌರಿ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಕ್ರಮವಾಗಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಆರು ಜನರು ಸಾವನ್ನಪ್ಪಿದ ದಿನಗಳ ನಂತರ ಈ ಘಟನೆ ನಡೆದಿದೆ. ಜುಲೈ 21 ರಂದು ತಂಡಿಕಸ್ಸಿಯಿಂದ ಲ್ಯಾಮ್ ಮಾರ್ಗವಾಗಿ ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಟ್ಯಾಕ್ಸಿ ರಾಜೌರಿಯ ಚಲನ್ ಗ್ರಾಮದ ಬಳಿ ಗುಡ್ಡಗಾಡು ರಸ್ತೆಯಿಂದ ಬಿದ್ದಿತ್ತು. ಮತ್ತೊಂದು ಅಪಘಾತದಲ್ಲಿ, ರಿಯಾಸಿ ಜಿಲ್ಲೆಯ ಬಿದ್ದಾ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರಿದ್ದ ಮಹೀಂದ್ರಾ ಬೊಲೆರೊ ಕಾರು 200 ಅಡಿಗಳಷ್ಟು ಕಮರಿಗೆ ಉರುಳಿಬಿದ್ದಿದ್ದು, ಕಾರಿನಲ್ಲಿದ್ದ ಅಮ್ಮ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. (ಏಜೆನ್ಸೀಸ್)