ನ್ಯೂಸ್

ಹಳೆ ಪ್ಯಾನ್​ ಕಾರ್ಡ್​ ರದ್ದು? ಈ 5 ವಿಷಯಗಳು ತಿಳಿದ್ರೆ 2.0 ಮೊರೆ ಹೋಗೋದು ಖಚಿತ! ಹೀಗಿದೆ ನೋಡಿ ವಿವರ

ನವದೆಹಲಿ: ಈಗಾಗಲೇ ಬಹುತೇಕರಿಗೆ ತಿಳಿದಿರುವಂತೆ ಪ್ಯಾನ್​ ಕಾರ್ಡ್​ ಅಪ್ಡೇಟ್​ ಆಗಲಿದೆ. ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್​ 2.0 ಮಾಡಿಸಿಕೊಳ್ಳಲು ಭಾರತೀಯರಿಗೆ ತಿಳಿಸಿದೆ. ಹಲವಾರು ಹೊಸ ಫೀಚರ್​ಗಳ ಜತೆಗೆ ಜನರ ಕೈಸೇರಲು ಈ ಕಾರ್ಡ್​ಗಳು ವಿಶೇಷವಾಗಿ ತಯಾರಾಗಿವೆ. ಪ್ರಸ್ತುತ ಪ್ಯಾನ್​ ಕಾರ್ಡ್ ಭಾರತೀಯರಿಗೆ ಪ್ರಮುಖ ದಾಖಲೆಯಾಗಿದ್ದು, ಹಲವು ವೈಶಿಷ್ಟ್ಯಗಳು ಮತ್ತು ಸುಧಾರಿತ ಸೌಲಭ್ಯಗಳೊಂದಿಗೆ ಪ್ಯಾನ್ 2.0 ಎಂಬ ಹೆಸರಿನಲ್ಲಿ ಹೊಸ ಕಾರ್ಡ್ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಜನಸಾಮಾನ್ಯರಲ್ಲಿ ಹಳೆಯ ಮತ್ತು ಹೊಸ ಕಾರ್ಡ್​ ಬಗ್ಗೆ ಗೊಂದಲ ಹೆಚ್ಚಾಗಿದೆ.

ಪ್ಯಾನ್​ ಕಾರ್ಡ್​ 2.0 ತಯಾರಿಕೆಗೆ 1,435 ಕೋಟಿ ರೂ. ವ್ಯಯಿಸಿರುವ ಕೇಂದ್ರ, ತೆರಿಗೆದಾರರ ಪಾವತಿಗಳು​ ಮತ್ತಷ್ಟು ಸುಲಭವಾಗಲಿ ಹಾಗೂ ಹಲವು ಲಾಭಗಳನ್ನು ಪಡೆಯಲಿ ಎಂದು ಜಾರಿಗೊಳಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹೊಸ ಪ್ಯಾನ್ 2.0 ಯೋಜನೆಯನ್ನು ಅನುಮೋದಿಸಿದ ಬೆನ್ನಲ್ಲೇ ಜನರ ಮನಸ್ಸಿನಲ್ಲಿ ಪ್ರಶ್ನೆಗಳು ಕಾಡಲಾರಂಭಿಸಿವೆ. ಪ್ಯಾನ್ 2.0 ಅಡಿಯಲ್ಲಿ ನವೀಕರಿಸಿದ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು, ಹೆಸರು, ಜನ್ಮ ದಿನಾಂಕದಂತಹ ತಮ್ಮ ವಿವರಗಳನ್ನು ಸರಿಪಡಿಸಲು ಅಥವಾ ನವೀಕರಿಸಲು ಅಗತ್ಯವಿರುವವರಿಗೆ ಶೀಘ್ರವೇ ಉಚಿತ ಅಪ್ಲಿಕೇಶನ್ ಆಯ್ಕೆಯು ಲಭ್ಯವಿರಲಿದೆ.

ಹೊಸ ಕಾರ್ಡ್​ ಕಡ್ಡಾಯವೇ?

ಪ್ಯಾನ್ ಕಾರ್ಡ್​ 2.0 ಜಾರಿಗೆ ಬರುವ ಮೊದಲು ಆದಾಯ ತೆರಿಗೆ ಇಲಾಖೆಯು ನೀಡಿರುವ ಹಳೆಯ ಕಾರ್ಡ್​ ಹೊಂದಿರುವವರು 2.0 ಕಾರ್ಡ್​ ಮಾಡಿಸಲೇಬೇಕು ಎಂಬುದು ಕಡ್ಡಾಯವಲ್ಲ. ಹಳೆಯ ಪ್ಯಾನ್ ಕಾರ್ಡ್‌ದಾರರು ಪ್ಯಾನ್ 2.0 ಮಾಡಿಸುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿರುವುದು ಇಲ್ಲಿ ಗಮನಿಸಬೇಕಾದ ಅಂಶ.

ಹಳೆಯ ಪ್ಯಾನ್​ ಮುಂದಿಟ್ಟು 2.0 ಪಡೆಯಬೇಕಾ?

ಕ್ಯೂಆರ್​ ಕೋಡ್‌ಗಳಿಲ್ಲದ ಹಳೆಯ ಪ್ಯಾನ್​ ಕಾರ್ಡ್‌ಗಳು ಅಥವಾ ಬಿಳಿ ಕಾರ್ಡ್‌ಗಳನ್ನು ಹೊಂದಿರುವವರು ಕೋಡ್ ಅನ್ನು ಒಳಗೊಂಡಿರುವ 2.0 ಕಾರ್ಡ್​ ಅನ್ನು ಪಡೆದುಕೊಳ್ಳುವುದು ಒಳಿತು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಹೊಸದಾಗಿ ನವೀಕರಿಸಿದ ಕಾರ್ಡ್ ವಿನ್ಯಾಸವು ಕ್ಯೂಆರ್​ ಕೋಡ್ ಅನ್ನು ಒಳಗೊಂಡಿರುವ ಕಾರಣ, ಇದು ಸೈಬರ್​ ವಂಚನೆಗಳನ್ನು ವೇಗವಾಗಿ ಪರಿಶೀಲಿಸಿ, ತಡೆಗಟ್ಟುತ್ತದೆ ಎಂದು ತಿಳಿಸಿದ್ದಾರೆ.

1. ಭದ್ರತಾ ಫೀಚರ್​ಗಳು ಮತ್ತಷ್ಟು ಅಪ್ಡೇಟ್​

ಹೊಸ ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ತಂತ್ರಜ್ಞಾನದ ಸಂಯೋಜನೆಯು ನಕಲು ಅಥವಾ ಬದಲಾವಣೆ ಮಾಡುವ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ಕೋಡ್‌ನಲ್ಲಿ ಎನ್‌ಕ್ರಿಪ್ಟ್ ಮಾಡಲಾದ ವೈಯಕ್ತಿಕ ಮಾಹಿತಿಯನ್ನು ನಿರ್ದಿಷ್ಟ ಸಾಫ್ಟ್‌ವೇರ್‌ನೊಂದಿಗೆ ಅಧಿಕೃತ ಸಿಬ್ಬಂದಿಗೆ ಮಾತ್ರ ತೆರೆಯಲು ಸಾಧ್ಯವಾಗುತ್ತದೆ. ಈ ಭದ್ರತಾ ಕ್ರಮವು ವಂಚಕರಿಗೆ ಮೂಲ ಪ್ಯಾನ್​ ಸಂಖ್ಯೆ, ಹೆಸರು ಮತ್ತು ಭಾವಚಿತ್ರವನ್ನು ಮಾರ್ಪಡಿಸಲು ಅವಕಾಶ ಕೊಡುವುದಿಲ್ಲ. ಮುದ್ರಿತ ಮಾಹಿತಿಯನ್ನು ದೃಢೀಕರಿಸಲು ಹಣಕಾಸು ಸಂಸ್ಥೆಗಳು ಈ ಕ್ಯೂಆರ್​ ಕೋಡ್ ಅನ್ನು ಬಳಸಿಕೊಳ್ಳಬಹುದಾಗಿದೆ.

2. ಸಮರ್ಥ ದೃಢೀಕರಣ ಪ್ರಕ್ರಿಯೆ

ನವೀಕರಿಸಿದ ಪ್ಯಾನ್​ ಕಾರ್ಡ್‌ನಲ್ಲಿರುವ ಕ್ಯೂಆರ್​ ಕೋಡ್ ಸ್ಕ್ಯಾನಿಂಗ್ ವೈಶಿಷ್ಟ್ಯದ ಮೂಲಕ ಗುರುತಿನ ಪರಿಶೀಲನೆಯು ಸುವ್ಯವಸ್ಥಿತವಾಗುತ್ತದೆ. ತಕ್ಷಣದ ಪರಿಶೀಲನೆ ಪ್ರಕ್ರಿಯೆಯು ಗುರುತಿನ ಕಳ್ಳತನ ಮತ್ತು ಸೋಗು ಹಾಕುವಿಕೆಯ ವಿರುದ್ಧ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ದೋಷಗಳು ಮತ್ತು ಮೋಸದ ಜಾಲಗಳಿಗೆ ತುತ್ತಾಗುವುದನ್ನು ಕಡಿಮೆ ಮಾಡುವ ಮೂಲಕ ಹಣಕಾಸಿನ ವಹಿವಾಟಿನ ಸಮಯದಲ್ಲಿ ಈ ಕಾರ್ಯವು ವಿಶೇಷವಾಗಿ ಮೌಲ್ಯಯುತವಾಗಿದೆ.

3. ಪ್ರಸ್ತುತ ಮಾಹಿತಿ ನಿರ್ವಹಣೆ

ನವೀಕರಿಸಿದ ಪ್ಯಾನ್ ಕಾರ್ಡ್ ಬಳಕೆದಾರರ ವಿವರಗಳನ್ನು ಆದಾಯ ತೆರಿಗೆ ಇಲಾಖೆಯ ಇತ್ತೀಚಿನ ಫಾರ್ಮ್ಯಾಟಿಂಗ್ ಅವಶ್ಯಕತೆಗಳಿಗೆ ಅನುಗುಣವಾಗಿ ಖಚಿತಪಡಿಸುತ್ತದೆ.

4. ನಿಯಂತ್ರಕ ಅನುಸರಣೆ

ಮರುವಿನ್ಯಾಸಗೊಳಿಸಲಾದ ಕಾರ್ಡ್ ಅನ್ನು ಪಡೆಯುವ ಬಳಕೆದಾರರು ಸರ್ಕಾರದ ನವೀಕರಿಸಿದ ಗುರುತಿನ ಪ್ರೋಟೋಕಾಲ್‌ಗಳೊಂದಿಗೆ ಹೊಂದಾಣಿಕೆ ಮಾಡಲಿದ್ದಾರೆ. ಇದು ಹೆಚ್ಚು ಸುರಕ್ಷಿತ ಹಣಕಾಸು ವ್ಯವಸ್ಥೆಯನ್ನು ಬೆಂಬಲಿಸಲಿದೆ.

5. ವಂಚನೆ ತಡೆಗಟ್ಟುವಿಕೆ

ಹೊಸದಾಗಿ ಕ್ಯೂಆರ್​ ಕೋಡ್‌ಗಳನ್ನು 2.0 ಮೂಲಕ ಜಾರಿಗೊಳಿಸಿರುವ ಕೇಂದ್ರ ಸರ್ಕಾರ, ಹೊಸ ಪ್ಯಾನ್​ ಕಾರ್ಡ್‌ಗಳನ್ನು ನಕಲು ಮಾಡಲು ಪ್ರಯತ್ನಿಸುವ ವಂಚಕರಿಗೆ ಚಳ್ಳೆ ಹಣ್ಣು ತಿನ್ನಿಸಲು ಸಜ್ಜಾಗಿದೆ. ವಂಚಕರು ಯಾವುದೇ ರೀತಿಯಲ್ಲಿ ಪ್ರಯತ್ನಿಸಿದರೂ ಸಹ ನಕಲುಗೊಳಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).