ನ್ಯೂಸ್

ಕರೊನಾ ಕರಾಳತೆ ಇದು...; ಸೌದಿಯಲ್ಲಿ ಭಿಕ್ಷೆ ಬೇಡುತ್ತಿರುವ 400ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು

ಹೈದರಾಬಾದ್​: ಕೊವಿಡ್-19ನಿಂದಾಗಿ ಲಾಕ್​ಡೌನ್​ ಅನಿವಾರ್ಯತೆ ಸೃಷ್ಟಿಯಾಯಿತು. ಇದರಿಂದಾಗಿ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನ್​ಲಾಕ್​ ಹಂತಗಳು ನಡೆಯುತ್ತಿದ್ದರೂ ವ್ಯವಸ್ಥೆ ಸಂಪೂರ್ಣ ಸರಿಹೋಗಿಲ್ಲ. ಬೇರೆಬೇರೆ ದೇಶಗಳಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದ ಹಲವರನ್ನು ಈಗಾಗಲೇ ವಾಪಸ್​ ಕರೆದುಕೊಂಡು ಬರಲಾಗಿದೆ. ಆದರೆ ಈ ಮಧ್ಯೆ ಮತ್ತೊಂದು ಬೆಚ್ಚಿಬೀಳುವ ಅಂಶ ಹೊರಬಿದ್ದಿದೆ.

ಸೌದಿ ಅರೇಬಿಯಾದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಸುಮಾರು 450 ಭಾರತೀಯ ಕಾರ್ಮಿಕರು ರಸ್ತೆಗಳ ಪಕ್ಕ ಕುಳಿತು ಭಿಕ್ಷೆ ಬೇಡುತ್ತಿದ್ದಾರೆ...! ಇವರೆಲ್ಲ ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಕಾಶ್ಮೀರ, ಬಿಹಾರ, ದೆಹಲಿ, ರಾಜಸ್ಥಾನ, ಕರ್ನಾಟಕ, ಹರಿಯಾಣ, ಪಂಜಾಬ್​ ಮತ್ತು ಮಹಾರಾಷ್ಟ್ರದವರಾಗಿದ್ದು, ಇವರೆಲ್ಲರ ಕೆಲಸದ ಪರವಾನಗಿ ಅವಧಿ ಮೀರಿದೆ. ಕೆಲಸವೂ ಇಲ್ಲದೆ...ಮರಳಿ ಭಾರತಕ್ಕೆ ಬರಲೂ ಸಾಧ್ಯವಾಗದೆ ಹೊಟ್ಟ-ಬಟ್ಟೆಗಾಗಿ ಭಿಕ್ಷೆ ಬೇಡುತ್ತಿದ್ದಾರೆ.

ಈ ಕಾರ್ಮಿಕರು ಕೈಯಲ್ಲಿ ಕೆಲಸವಿದ್ದಾಗ ಬಾಡಿಗೆ ರೂಂನಲ್ಲಿ ಇದ್ದರು. ಆದರೆ ಅವರ ಪರವಾನಗಿ ಅವಧಿ ಮುಗಿದಿದ್ದು ಸ್ಥಳೀಯ ಅಧಿಕಾರಿಗಳಿಗೆ ಗೊತ್ತಾಗುತ್ತಿದ್ದಂತೆ ಜೆಡ್ಡಾದ ಶುಮೈಸಿಯಲ್ಲಿರುವ ಬಂಧನ ಕೇಂದ್ರಕ್ಕೆ ಕಳಿಸಿದ್ದಾರೆ. ಇದರಿಂದಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ಈ ಕಾರ್ಮಿಕರು ಭಿಕ್ಷೆ ಬೇಡುತ್ತಿರುವ ವಿಡಿಯೋ ಕೂಡ ಎಲ್ಲೆಡೆ ವೈರಲ್​ ಆಗಿದೆ. ಇದನ್ನೂ ಓದಿ: VIDEO: ‘ಕೆಂಪು ಹೂವು’ ಚೆಲುವೆಲ್ಲಾ ನಂದೆಂದಿತು… ‘ನೀಲಿ ಹಾವು’ ಅದರ ಸುತ್ತಿಕೊಂಡಿತು…!

ಈ ವಿಡಿಯೋದಲ್ಲಿ ಕೆಲವರು ಕಣ್ಣಲ್ಲಿ ನೀರು ಹಾಕಿದ್ದಾರೆ. ನಾವು ಯಾವುದೇ ಅಪರಾಧ ಮಾಡಿಲ್ಲ. ಲಾಕ್​ಡೌನ್​​ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದೇವೆ. ನಮ್ಮನ್ನು ಈ ಬಂಧನ ಕೇಂದ್ರಕ್ಕೆ ಕರೆತರಲಾಗಿದೆ. ಹಾಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಮಿಕರೋರ್ವರು ಕಣ್ಣಲ್ಲಿ ನೀರು ಹಾಕಿದ್ದಾರೆ.

ಸುಮಾರು ನಾಲ್ಕು ತಿಂಗಳಿಂದಲೂ ನಾವು ಸಹಿಸಲು ಸಾಧ್ಯವಾಗದಷ್ಟು ಕಷ್ಟ ಅನುಭವಿಸುತ್ತಿದ್ದೇವೆ. ಇಲ್ಲಿ ನಮ್ಮೊಂದಿಗೆ ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷಿಯಾ, ಶ್ರೀಲಂಕಾದ ಕಾರ್ಮಿಕರೂ ಇದ್ದರು. ಆದರೆ ಅವರನ್ನೆಲ್ಲ ಆಯಾ ದೇಶಗಳ ಸರ್ಕಾರಗಳು ವಾಪಸ್​ ಕರೆಸಿಕೊಂಡಿವೆ. ಆದರೆ ನಾವು ಮಾತ್ರ ಇಲ್ಲಿ ಸಿಲುಕಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ.  ಇದನ್ನೂ ಓದಿ: ದಾಖಲೆ ಬರೆಯಿತು ಕಾಲಿವುಡ್​ ನಟ ವಿಜಯ್​ ಮಾಡಿದ ಆ ಒಂದೇ ಒಂದು ಟ್ವೀಟ್​!

ಇಲ್ಲಿರುವ ಓರ್ವ ಕಾರ್ಮಿಕನ ಸಹೋದರ ಮೃತಪಟ್ಟಿದ್ದರೆ, ತಾಯಿಯ ಸ್ಥಿತಿ ಗಂಭೀರವಾಗಿದೆ. ನನಗೆ ಭಾರತಕ್ಕೆ ವಾಪಸ್ ಹೋಗಬೇಕು ಎಂದು ಅವರು ದುಃಖದಿಂದ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಸೌದಿಯ ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್​​ರನ್ನು ರಾಷ್ಟ್ರೀಯ ಮಾಧ್ಯಮವೊಂದು ಪ್ರಶ್ನಿಸಿದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)