ಬೆಂಗಳೂರು: ಒಂದೂವರೆ ತಿಂಗಳಿಂದ ಇದ್ದ ಲಾಕ್‌ಡೌನ್, ಸೋಮವಾರ ಸ್ವಲ್ಪ ಲೂಸ್‌ಡೌನ್ ಆಗುತ್ತಿದ್ದಂತೆಯೇ ಮದ್ಯದಂಗಡಿಗಳತ್ತ ಗಂಡು-ಹೆಣ್ಣು ಭೇದವಿಲ್ಲದೆ ಮದ್ಯಪ್ರಿಯರು ಹೇಗೆ ಧಾವಿಸಿ ಬಂದರೆಂಬುದನ್ನು ಇವತ್ತು ಇಡೀ ದಿನ ನೀವು ನೋಡಿಯೇ ಇದ್ದೀರಿ. ಕಿಲೋಮೀಟರ್‌ಗಟ್ಟಲೆ ಸರತಿ ಸಾಲು ನಿಂತು ಖರೀದಿಸಿದ್ದನ್ನೂ ಗಮನಿಸಿದ್ದೀರಿ.
ಹಾಗಾದರೆ ಇವತ್ತು ಒಂದೇ ದಿನ ರಾಜ್ಯದಾದ್ಯಂತ ಎಷ್ಟು ಮೌಲ್ಯದ ಮದ್ಯ ಬಿಕರಿಯಾಯಿತು? ಅದರ ಒಂದು ಅಂದಾಜನ್ನು ಅಬಕಾರಿ ಇಲಾಖೆಯವರು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಸರದಿಯಲ್ಲಿ ನಿಂತು ಮದ್ಯ ಖರೀದಿಸಿದ ಮದ್ಯಪ್ರಿಯರು
ಸೋಮವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬರೋಬ್ಬರಿ 45 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ!
ಈ ಭರ್ಜರಿ ವಹಿವಾಟಿನಲ್ಲಿ ಬಿಯರ್ ಮತ್ತು ಹಾಟ್ ಡ್ರಿಂಕ್ಸ್‌ಗಳು ಎಷ್ಟು ಸೇಲ್ ಆಗಿವೆ ಎಂಬುದರ ಲೆಕ್ಕವನ್ನೂ ಇಲಾಖೆ ನೀಡಿದೆ. ಬಿಯರ್ ಸುಮಾರು 3.9 ಲಕ್ಷ ಲೀಟರ್ ಮಾರಾಟವಾಗಿದ್ದರೆ ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯ (ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್- ಐಎಂಎಫ್‌ಎಲ್) ಸುಮಾರು 8.5 ಲಕ್ಷ ಲೀಟರ್ ಮಾರಾಟವಾಗಿದೆ!
ಮದ್ಯಮಾರಾಟ ಮುಂದುವರಿಯಲಿದ್ದು, ಕಟ್ಟುನಿಟ್ಟಾಗಿ ಎಂಆರ್‌ಪಿ ದರದಲ್ಲೇ ಮದ್ಯವನ್ನು ಮಾರಾಟ ಮಾಡಬೇಕು ಎಂದು ಇಲಾಖೆಯು ಮದ್ಯದಂಗಡಿಗಳಿಗೆ ತಿಳಿಸಿದೆ. ಎಂಆರ್‌ಪಿಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದರೆ ಅಂತಹ ಅಂಗಡಿಗಳ ಲೈಸೆನ್ಸ್ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದೆ.
ಮದ್ಯದ ಮಳಿಗೆಯಲ್ಲಿ ಕೇವಲ ಐದು ಜನರು ಮಾತ್ರ ಗ್ರಾಹಕರು ಇರುವಂತೆ ಹಾಗೂ ಪರಸ್ಪರ 6 ಅಡಿ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿದೆ. ಮಳಿಗೆಯ ನೌಕರರು ಗ್ಲೌಸ್ ಧರಿಸುವುದು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯ.
ಈಗಾಗಲೇ ಕರ್ನಾಟಕದ ಡಿಪೋಗಳಲ್ಲಿ ಮದ್ಯದ ದಾಸ್ತಾನು ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ. ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಸರ್ಕಾರ ಅನುಮತಿಯನ್ನೂ ನೀಡಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.