ನ್ಯೂಸ್

44 ಗಾಯ, ಮೆದುಳಿಗೆ ಹಾನಿ: ಪೊಲೀಸ್​ ಕಸ್ಟಡಿಯಲ್ಲಿ ಮೃತಪಟ್ಟ ಯುವಕನ ಮರಣೋತ್ತರ ವರದಿಯಲ್ಲಿ ಶಾಕಿಂಗ್​ ಸಂಗತಿ! Tamil Nadu custodial death

Tamil Nadu custodial death : ಪೊಲೀಸ್​ ಕಸ್ಟಡಿಯಲ್ಲಿ ಯುವಕನೊಬ್ಬನ ಸಾವು ತಮಿಳುನಾಡಿನಲ್ಲಿ ಭಾರಿ ಗದ್ದಲ ಸೃಷ್ಟಿಸಿದೆ. ಮೃತ ಯುವಕ ಅಜಿತ್​ ಕುಮಾರ್ ಅವರ ಮರಣೋತ್ತರ ವರದಿ ಬಹಿರಂಗವಾಗಿದ್ದು, ಪೊಲೀಸರು ದೈಹಿಕವಾಗಿ ಹಲ್ಲೆ ಮಾಡಿರುವುದು ಸಾಬೀತಾಗಿದೆ. ಅಜಿತ್​ ದೇಹದಲ್ಲಿ ತೀವ್ರ ಆಂತರಿಕ ರಕ್ತಸ್ರಾವವಾಗಿದ್ದು, ಸಾಕಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಮರಣೋತ್ತರ ವರದಿಯು ಇಂಡಿಯಾ ಟುಡೆಗೆ ಲಭ್ಯವಾಗಿದ್ದು, ಅಜಿತ್​ ಮೇಲೆ ಭೀಕರವಾಗಿ ದೈಹಿಕ ಹಾನಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಿರಂತರ ಕಿರುಕುಳ ಹಾಗೂ ದೀರ್ಘಕಾಲದವರೆಗೆ ಗಂಭೀರ ಗಾಯಗಳಿಂದ ನರಳಿ ನರಳಿ ಅಜಿತ್​ ಸಾವಿಗೀಡಾಗಿದ್ದಾರೆ ಎಂಬುದನ್ನು ಮರಣೋತ್ತರ ವರದಿ ಹೇಳಿದೆ.

ಹೃದಯ ಮತ್ತು ಯಕೃತ್ತಿನಂತಹ ಆಂತರಿಕ ಅಂಗಗಳಲ್ಲಿ ರಕ್ತಸ್ರಾವಗಳು ಮತ್ತು ನೆತ್ತಿಯ ಕೆಳಭಾಗದ ಮೇಲಿನ ಗಾಯಗಳು ಆಂತರಿಕ ರಕ್ತಸ್ರಾವವನ್ನು ಸೂಚಿಸುತ್ತವೆ. ಈ ರೀತಿಯ ಗಾಯಗಳು ಸಾಮಾನ್ಯವಾಗಿ ಅಪಘಾತದ ಸಂದರ್ಭದಲ್ಲಿ ಅಥವಾ ಪ್ರತ್ಯೇಕ ಹಲ್ಲೆಯ ಸಮಯದಲ್ಲಿ ಕಂಡುಬರುವುದಿಲ್ಲ. ಬದಲಿಗೆ ದೀರ್ಘಕಾಲದವರೆಗೆ ಉದ್ದೇಶಪೂರ್ವಕ ದೈಹಿಕ ದೌರ್ಜನ್ಯ ಸಮಯದಲ್ಲಿ ಇಂತಹ ಗಾಯಗಳು ಕಂಡುಬರುತ್ತವೆ ಎಂದು ವರದಿ ಹೇಳುತ್ತದೆ.

ಮರಣೋತ್ತರ ವರದಿಯ ಪ್ರಕಾರ, ಆಳವಾದ ಸ್ನಾಯು ಮಟ್ಟದ ಗಾಯಗಳು ಸೇರಿ ಒಟ್ಟು 44 ಗಾಯಗಳು ಅಜಿತ್​ ದೇಹದಲ್ಲಿ ಕಂಡುಬಂದಿವೆ. ಮೆದುಳು ಮತ್ತು ಇತರೆ ಅಂಗಗಳಲ್ಲಿ ರಕ್ತಸ್ರಾವವಾಗಿದೆ ಮತ್ತು ದೇಹದಾದ್ಯಂತ ವಿವಿಧ ಭಾಗಗಳಲ್ಲಿ ಗಾಯಗಳು ಕಂಡುಬಂದಿವೆ. ಈ ಗಾಯಗಳು ಕೋಲುಗಳು, ಲಾಠಿ ಅಥವಾ ರಾಡ್‌ಗಳಂತಹ ವಸ್ತುಗಳನ್ನು ಬಳಸಿ ಪದೇ ಪದೇ ನಡೆಸುವ ದೈಹಿಕ ಹಲ್ಲೆಗೆ ಸಮನಾಗಿರುತ್ತದೆ ಎಂದು ವರದಿ ಹೇಳಿದೆ. ಮರಣೋತ್ತರ ಪರೀಕ್ಷೆಯ ವರದಿಯ ಒಟ್ಟಾರೆ ಸಂಶೋಧನೆಗಳು, ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ನೈಸರ್ಗಿಕ ಸಾವು, ಸಣ್ಣಪುಟ್ಟ ಗಲಾಟೆ ಅಥವಾ ರೋಗಗ್ರಸ್ತ ಎಂಬ ಯಾವುದೇ ಹೇಳಿಕೆಗಳಿಗೆ ತದ್ವಿರುದ್ಧವಾಗಿವೆ.

ಗಾಯಗಳು ಕೇವಲ ಮೇಲ್ನೋಟಕ್ಕೆ ಮಾತ್ರ ಕಂಡುಬಂದಿಲ್ಲ. ಅಂದರೆ, ಗಾಯಗಳು ತೀವ್ರತೆ ಕಡಿಮೆ ಇಲ್ಲ. ಅವು ತುಂಬಾ ಆಳವಾಗಿವೆ. ಅಜಿತ್​ ಅವರ ದೇಹದ ಕನಿಷ್ಠ 30 ಸ್ಥಳಗಳಲ್ಲಿನ ಗಾಯಗಳು ಸ್ನಾಯು ಪದರದ ಆಳಕ್ಕೂ ವಿಸ್ತರಿಸಿದ್ದವು. ಅದನ್ನು ನೋಡಿದರೆ, ಬಲವಾಗಿ ಹಾಗೂ ನಿರಂತರವಾಗಿ ಹೊಡೆದಿರುವುದನ್ನು ಸೂಚಿಸುತ್ತದೆ.

ವರದಿಯು ಮೆದುಳಿನ ನೆತ್ತಿಯ ಮೇಲಿನ ಗಾಯಗಳು, ತಲೆಬುರುಡೆಯ ಎಕಿಮೊಸಿಸ್ ಮತ್ತು ಎರಡೂ ಸೆರೆಬ್ರಲ್ ಲೋಬ್ಸ್​ನಲ್ಲಿ ರಕ್ತಸ್ರಾವವಾಗಿದ್ದರಿಂದ ವ್ಯಾಪಕವಾದ ಮೆದುಳಿಗೆ ಆಘಾತ ಉಂಟಾಗಿದೆ ಎಂದು ತೋರಿಸಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಾಗ ಆ ಪ್ರದೇಶದಲ್ಲಿ ರಕ್ತಸ್ರಾವ ಮತ್ತು ಊತ ಉಂಟಾಗುವುದರಿಂದ ನೆತ್ತಿಯ ಕೆಳಗೆ ಉಂಟಾಗುವ ಮೂಗೇಟುಗಳನ್ನು ಸಬ್‌ಸ್ಕ್ಯಾಲ್ಪ್ ಕನ್ಟ್ಯೂಷನ್ ಎಂದು ಕರೆಯಲಾಗುತ್ತದೆ. ಚರ್ಮವನ್ನು ಕತ್ತರಿಸದೇ ಇರಬಹುದು ಆದರೆ, ಒಳಭಾಗದಲ್ಲಿ ಗಾಯ ಮತ್ತು ರಕ್ತಸ್ರಾವವಿರುತ್ತದೆ. ಕೋಲುಗಳು ಅಥವಾ ಇತರ ಮೊಂಡಾದ ವಸ್ತುಗಳಿಂದ ಹೊಡೆಯುವಂತಹ ಹಿಂಸಾತ್ಮಕ ಹಲ್ಲೆಗಳಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ.

ಒಟ್ಟಾರೆಯಾಗಿ ತೀವ್ರ ಕಿರುಕುಳದಿಂದ ಅಜಿತ್​ ಅವರ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಜಿತ್ ಅವರ ಮರಣೋತ್ತರ ಪರೀಕ್ಷೆಯು ತೀವ್ರವಾದ ಕಸ್ಟಡಿ ಹಿಂಸಾಚಾರದ ಬಲವಾದ ವೈದ್ಯಕೀಯ ಪುರಾವೆಯಾಗಿ ನಿಂತಿದೆ. (ಏಜೆನ್ಸೀಸ್​)