ಉತ್ತರಾಖಂಡ: ಕಳೆದ ಎರಡು ವಾರಗಳ ಹಿಂದೆ ನಿರ್ಮಾಣ ಹಂತದಲ್ಲಿದ್ದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತಗೊಂಡ ಪರಿಣಾಮ 41 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಹಲವು ನುರಿತ ರಕ್ಷಣಾ ತಂಡಗಳು ನಿರಂತರವಾಗಿ ಶ್ರಮಿಸಿ, ಇದೀಗ ಅಷ್ಟು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗಿದೆ. ಯಾವುದೇ ತೊಂದರೆಗಳಿಗೂ ಒಳಗಾಗದ ಕಾರ್ಮಿಕರು ಹೊರಬಂದ ಸುದ್ದಿ ಕೇಳಿ ಕುಟುಂಬಸ್ಥರು ಹಾಗೂ ದೇಶದ ಜನತೆ ಸಂತಸದಿಂದ ಕಂಬನಿ ಮಿಡಿಯಿತು.
ರಕ್ಷಣಾ ತಂಡಗಳು ಮತ್ತು ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರ ಸತತ ಪ್ರಯತ್ನಗಳು ಇಂದು 41 ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಕುಟುಂಬದೊಂದಿಗೆ ಜೀವಿಸುವಂತೆ ಮಾಡಿದೆ. ರಕ್ಷಿಸಲ್ಪಟ್ಟ 41 ಕಾರ್ಮಿಕರ ಪೈಕಿ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ನಿವಾಸಿಯಾದ ರಾಮಪ್ರಸಾದ್ ನರ್ಜಾರಿ ಎಂಬುವವರ ಕುಟುಂಬವು ಸುಮಾರು 17 ದಿನಗಳ ನಂತರ ಅವರು ಸುರಂಗದಿಂದ ಹೊರಬಂದ ವಿಷಯ ತಿಳಿದು ಭಾರೀ ಸಂತಸವನ್ನು ವ್ಯಕ್ತಪಡಿಸಿದೆ.
ರಾಮಪ್ರಸಾದ್ ನರ್ಜಾರಿ ಅವರ ಸಹೋದರ ಶಾನ್ ಮಾತನಾಡಿ, "ಸುರಂಗದಿಂದ ಅಣ್ಣನನ್ನು ರಕ್ಷಿಸುವ ಮೂಲಕ ದೇವರು ಅವರಿಗೆ ಎರಡನೇ ಜೀವನ ನೀಡಿದೆ. ಅವನು ಒಳಗೆ ಸಿಲುಕಿಕೊಂಡಿದ್ದ ಅಷ್ಟು ದಿನಗಳು ನಾವು ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ. ಯಾವಾಗಲೂ ಭಯಭೀತರಾಗಿದ್ದೆವು, ಪ್ರತಿಕ್ಷಣ ದೇವರನ್ನು ಪ್ರಾರ್ಥಿಸುತ್ತಿದ್ದೆವು. ಇವೆಲ್ಲವೂ ಅವರು ಸುರಕ್ಷಿತವಾಗಿ ಹೊರಬರಲು ಸಾಧ್ಯವಾಯಿತು" ಎಂದು ಹೇಳಿದರು.
ಇನ್ನು ರಾಮಪ್ರಸಾದ್ ಅವರ ತಂದೆ ರೂಪೆನ್ ನರ್ಜಾರಿ ಕೂಡ ಮಾತನಾಡಿದ್ದು, "ತುಂಬಾ ಸಂತಸವಾಯಿತು. ಉತ್ತರಾಖಂಡದ ರಕ್ಷಣಾ ತಂಡವು ನನ್ನ ಪುತ್ರನನ್ನು ಸುರಕ್ಷಿತವಾಗಿ ಹೊರಗೆ ಕರೆತಂದು, ಹೂಮಾಲೆ ಹಾಕಿ ಸ್ವಾಗತಿಸಿತು. ಆಗ ನನಗೆ ಅತೀವ ಖುಷಿ ಉಂಟಾಯಿತು" ಎಂದು ಭಾವುಕರಾದರು,(ಏಜೆನ್ಸೀಸ್).