ನ್ಯೂಸ್

ಜಲಕ್ಷಾಮದ ಕಾರ್ಮೋಡ: ವಾಟರ್ ಬಜೆಟ್​ಗೆ ನಿರ್ಲಕ್ಷ್ಯ, 10 ವರ್ಷದಲ್ಲಿ ಶೇ.40 ನೀರಿನ ಕೊರತೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕುಡಿಯುವ ನೀರಿನ ಲಭ್ಯತೆ, ಸಂರಕ್ಷಣೆ, ಬಳಕೆ ಬಗ್ಗೆ ಎಚ್ಚರ ವಹಿಸಬೇಕಿದ್ದ ರಾಜ್ಯ ಸರ್ಕಾರ ಕಾಲಕಾಲಕ್ಕೆ ನೀರಿನ ಬಜೆಟ್ ಮತ್ತು ಆಡಿಟ್ ಮಾಡದೆ ನಿರ್ಲಕ್ಷ್ಯ ತೋರಿರುವ ಪರಿಣಾಮ ಭವಿಷ್ಯದಲ್ಲಿ ಪರಿಸ್ಥಿತಿ ಕೈಮೀರುವ ಆತಂಕದ ಕಾಮೋಡ ದಟ್ಟೆ ೖಸಲಾರಂಭಿಸಿದೆ. ಮತ್ತೊಂದೆಡೆ, ಗಾಯದ ಮೇಲೆ ಬರೆ ಎಂಬಂತೆ ತಾಪಮಾನ ಏರಿಕೆಯಿಂದಾಗಿ 2030ರ ವೇಳೆಗೆ ಶೇ.40 ಜನರಿಗೆ ನೀರಿನ ಕೊರತೆ ಕಾಡಲಿದೆ ಎಂಬ ವರದಿಯೂ ಬಹಿರಂಗವಾಗಿದೆ. ಹವಾಮಾನ ಬದಲಾವಣೆಯಿಂದ ಏರಿಕೆಯಾಗಲಿರುವ ತಾಪಮಾನ ಮುಂದಿನ ದಿನಗಳಲ್ಲಿ ಸೃಷ್ಟಿಸಲಿರುವ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆ ಬಹಳ ಮುಖ್ಯವಾದದ್ದು. ಅದಕ್ಕಾಗಿಯೇ ನೀರಿನ ಸಂರಕ್ಷಣೆಗಾಗಿ ನೀರಿನ ಬಜೆಟ್ ರೂಪಿಸಬೇಕು, ಸಮರ್ಪಕ ಆಡಿಟ್ ನಡೆಸಬೇಕು. ಎಲ್ಲರಿಗೂ ನಲ್ಲಿಯ ನೀರನ್ನು ಕೊಡುವ ಉದ್ದೇಶದಿಂದ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದೆ. ಸದ್ಯ ಮೇಲ್ಮೈ ನೀರು ಎಲ್ಲಿ ಲಭ್ಯವಿದೆಯೋ ಅಲ್ಲಿ ಯೋಜನೆ ಜಾರಿಯಾಗುತ್ತಿದೆ. ಅದರ ಜತೆಜತೆಗೆ ನೀರಿನ ಸಂರಕ್ಷಣೆ, ಅಂತರ್ಜಲ ವೃದ್ಧಿ ಸರ್ಕಾರದ ಆದ್ಯ ಕರ್ತವ್ಯವಾಗಬೇಕಾಗಿದೆ. ಅದಕ್ಕಾಗಿಯೆ ಕಾನೂನಿನಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವಾಟರ್ ಬಜೆಟ್ ಮತ್ತು ವಾಟರ್ ಆಡಿಟ್ ಬಗ್ಗೆ ಹೇಳಲಾಗಿದೆ. ಆದರೆ ಅನುಷ್ಠಾನ ಮಾತ್ರ ಆಗುತ್ತಿಲ್ಲ.

ತಾಪಮಾನ ಏರಿಕೆ ಸಂಕಷ್ಟ: ಒಂದು ಶತಮಾನದಲ್ಲಿ ತಾಪಮಾನ ಒಂದು ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಳವಾಗಿದ್ದರೆ, 2040ರ ವೇಳೆಗೆ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚುತ್ತದೆ. ಈ ಶತಮಾನದ ಕೊನೆಗೆ 2 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುತ್ತದೆ. ಈ ರೀತಿಯಾದಾಗ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ. ಭಾರತ ಭೂಮಿಯ ಮಧ್ಯಭಾಗದಲ್ಲಿ ಇರುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ. ಮಳೆ ಹಾಗೂ ಬರ ಎರಡೂ ಇರುತ್ತದೆ. ತಾಪಮಾನ ಹೆಚ್ಚಳದಿಂದ ಒಣ ಹವೆಯ ಪರಿಣಾಮ ನೀರು ಆವಿಯಾಗುತ್ತದೆ. ಜಲಮೂಲಗಳು ತೊಂದರೆಗೆ ಒಳಗಾಗುತ್ತವೆ.

ಸಮಿತಿ ಆಗಬೇಕು: ಪ್ರತಿ ರಾಜ್ಯವೂ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ನೀರಿನ ಲಭ್ಯತೆಯ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿ ಹಲವು ವರ್ಷಗಳೇ ಕಳೆದಿವೆ. ಆದರೆ ಆ ಪ್ರಯತ್ನವೇ ಆಗಿಲ್ಲ. ಉಚಿತ ವಿದ್ಯುತ್ ಪೂರೈಕೆ ಸೌಲಭ್ಯ ಬಿಟ್ಟುಕೊಡುವುದಕ್ಕೆ ಮನವೊಲಿಕೆ, ಪ್ರೇರಣೆ ನೀಡುವ ಮಾರ್ಗ ಅನುಸರಿಸಲು ಇಲಾಖೆ ಯೋಚಿಸಿದ್ದು, ರೂಪುರೇಷೆ ಸಿದ್ಧಪಡಿಸುತ್ತಿದೆ.

ಪರ್ಯಾಯ ಮಾರ್ಗೋಪಾಯ: ಎಲ್ಲ ರೈತರಿಗೂ ನಿರಂತರ 7 ತಾಸು, ಗುಣಮಟ್ಟದ ವಿದ್ಯುತ್ ಪೂರೈಸುವುದಕ್ಕೆ ಪ್ರಸರಣ ಮತ್ತು ವಿತರಣಾ ಮಾರ್ಗಗಳ ಬಲವರ್ಧನೆ, ಸವಲತ್ತುಗಳ ಅಭಿವೃದ್ಧಿ ಅಗತ್ಯವಿದೆ. ಈ ರೀತಿಯ ಸುಧಾರಣಾ ಕ್ರಮಗಳಿಗೆ ಬಂಡವಾಳದ ಅಗತ್ಯವಿದ್ದು, ‘ಗಿವ್​ಇಟ್​ಅಪ್’ ಅಭಿಯಾನವು ಆರ್ಥಿಕ ಮಿತವ್ಯಯದ ಪರ್ಯಾಯ ಮಾರ್ಗವಾಗಲಿದೆ ಎನ್ನುವುದು ಸರ್ಕಾರದ ಚಿಂತನೆಯಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆ ಅರ್ಹ ರೈತರಿಗೆ ಹಗಲು ಹೊತ್ತು ಏಳು ತಾಸು ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಉಳ್ಳ ರೈತರು ಸ್ವಯಂಪ್ರೇರಣೆಯಿಂದ ಉಚಿತ ಸವಲತ್ತು ತ್ಯಜಿಸಿದರೆ ಬೊಕ್ಕಸದ ಮೇಲಿನ ಭಾರ ತಗ್ಗಲಿದೆ ಎಂದು ಮೂಲಗಳು ವಿವರಿಸಿವೆ.

ಬಜೆಟ್ ಆಡಿಟ್ ಹೇಗೆ?: ಪ್ರತಿ ವ್ಯಕ್ತಿಗೆ ನಿತ್ಯ ತಲಾವಾರು 80 ಎಲ್​ಪಿಸಿಡಿ ನೀರು ಬೇಕಾಗುತ್ತದೆ. ಆದರೆ ಅಷ್ಟು ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ನೀರನ್ನು ಸಂರಕ್ಷಿಸುವುದೇ ವಾಟರ್ ಬಜೆಟ್. ಎಷ್ಟು ನೀರು ಲಭ್ಯ, ಅದರ ಸಂರಕ್ಷಣೆ ಹೇಗೆ? ನದಿ ಮೂಲಗಳು, ಜಲಾನಯನ ಪ್ರದೇಶಗಳ ರಕ್ಷಣೆ, ಮಣ್ಣಿನ ಸಂರಕ್ಷಣೆ, ಝುರಿಗಳ ಪುನಶ್ಚೇತನ, ಅತಿಯಾದ ಅಂತರ್ಜಲ ಬಳಕೆಗೆ ಕಡಿವಾಣ, ಕೆರೆಗಳ ಹೂಳು ತೆಗೆಯುವುದು, ಹೊಸ ಕೆರೆಗಳ ನಿರ್ವಣ, ಚೆಕ್ ಡ್ಯಾಂ ಹೆಚ್ಚಿಸುವುದು, ನೀರಿನ ಸರಬರಾಜು ನಿರ್ವಹಣೆ, ನೀರು ಉಳಿತಾಯಕ್ಕೆ ತಂತ್ರಜ್ಞಾನ ರೂಪಿಸುವುದು, ಸೋರಿಕೆ ಹಾಗೂ ನಷ್ಟವಾಗದಂತೆ ಎಚ್ಚರಿಕೆ ವಹಿಸುವುದು, ಕಾಲಕಾಲಕ್ಕೆ ನೀರು ನೀತಿ ರೂಪಿಸಿ ಜಾರಿಗೊಳಿಸುವುದೇ ವಾಟರ್ ಬಜೆಟ್. ಈ ವಾಟರ್ ಬಜೆಟ್ ಸರಿಯಾಗಿ ಜಾರಿಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ವಾಟರ್ ಆಡಿಟ್.

ಮೇಲ್ಮೈ ನೀರು ಲಭ್ಯತೆ ಇರುವ ಕಡೆ ಜಲ ಜೀವನ್ ಮಿಷನ್ ಜಾರಿಗೆ ತರಲಾಗಿದೆ. ಇದರಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಆದರೆ ವಾಟರ್ ಬಜೆಟ್ ಮತ್ತು ಆಡಿಟ್ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಬೇಕಾಗಿದೆ. | ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ ಸರ್ಕಾರ ನೀರಿನ ಬಳಕೆಗೆ ಕಡಿವಾಣ ಹಾಕಲೇಬೇಕಾಗಿದೆ. ಮುಂದಿನ ಪೀಳಿಗೆಗೆ ಗುಣ ಮಟ್ಟದ ನೀರು ಸಿಗುವುದಿಲ್ಲ. ವಾಟರ್ ಬಜೆಟ್, ವಾಟರ್ ಆಡಿಟ್​ಗೆ ಆದ್ಯತೆ ನೀಡಲೇಬೇಕು. | ಪ್ರೊ. ಕೃಷ್ಣರಾಜು ಪರಿಸರ ಅರ್ಥಶಾಸ್ತ್ರಜ್ಞ

ಏನಾಗಲಿದೆ ಸಮಸ್ಯೆ?

  • 2030ರ ವೇಳೆಗೆ ಶೇ.40 ಜನರಿಗೆ ನೀರಿನ ಕೊರತೆ ಕಾಡಬಹುದು
  • 2 ಸಾವಿರಕ್ಕೂ ಹೆಚ್ಚಿನ ಹಳ್ಳಿಗಳು ಬರಗಾಲಕ್ಕೆ ತುತ್ತಾಗಬಹುದು
  • 138 ತಾಲೂಕುಗಳಲ್ಲಿ ಅಂತರ್ಜಲ ಕುಸಿಯುವ ಸಾಧ್ಯತೆ ಇದೆ
  • ರಾಜ್ಯದ ಶೇ.96 ಅಂತರ್ಜಲ ಕಲುಷಿತವಾಗುತ್ತದೆ
  • ಪ್ಲೋರೈಡ್, ಜಿಂಕ್​ನಂತಹ ರಾಸಾಯನಿಕಗಳು ಹೆಚ್ಚಳ
  • ಪ್ರತಿ ವರ್ಷ ಶೇ.13 ಅಂತರ್ಜಲ ಕಡಿಮೆಯಾಗುತ್ತದೆ

ಪರಿಹಾರವೇನು?

  • ನದಿ, ಜಲಾನಯನ ಪ್ರದೇಶಗಳ ಸಂರಕ್ಷಣೆ
  • ಅಂತರ್ಜಲ ಮರುಪೂರಣ ವ್ಯವಸ್ಥೆಗೆ ಪ್ರಾಮುಖ್ಯತೆ
  • ನೀರಿನ ಮರುಬಳಕೆಗೆ ಆದ್ಯತೆ
  • ಕಡಿಮೆ ನೀರು ಬಳಸುವ ಕೈಗಾರಿಕೆಗಳಿಗೆ ಒತ್ತು
  • ಕೃಷಿಯಲ್ಲಿ ನೀರಿನ ಬಳಕೆ ಕಡಿಮೆ ಮಾಡುವುದು
  • ವೈಜ್ಞಾನಿಕವಾಗಿ ನಲ್ಲಿಗಳ ವ್ಯವಸ್ಥೆ ಮಾಡುವುದು
  • ಅಭಿವೃದ್ಧಿ ಹೆಸರಿನಲ್ಲಿ ಕಾಡುನಾಶ ತಪ್ಪಿಸುವುದು
  • ಸೋರಿಕೆ ತಡೆಗಟ್ಟುವುದು
  • ಬಳಕೆ ಬಗ್ಗೆ ಸರಿಯಾದ ಯೋಜನೆ ರೂಪಿಸುವುದು

ಬೊಕ್ಕಸದಿಂದ ಭರ್ತಿ: ರೈತರ ನೀರಾವರಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಪೂರೈಸಿದ ವೆಚ್ಚವನ್ನು ಎಸ್ಕಾಂಗಳಿಗೆ ಸರ್ಕಾರವೇ ಭರಿಸುತ್ತಿದೆ. ಐದು ವಿದ್ಯುತ್ ಸರಬರಾಜು ಕಂಪನಿಗಳಿಂದ ಒಟ್ಟಾರೆ ವಾರ್ಷಿಕ ಎರಡು ಕೋಟಿ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದ್ದು, 19,962 ಕೋಟಿ ರೂ. ವೆಚ್ಚವನ್ನು ಸರ್ಕಾರದ ಬೊಕ್ಕಸದಿಂದ ತುಂಬಿಕೊಡಲಾಗುತ್ತಿದೆ.

ಕೃಷಿಯಲ್ಲಿ ತೊಡಗಿಕೊಂಡ ಬಂಡವಾಳಶಾಹಿಗಳು, ಶ್ರೀಮಂತರು ಹಾಗೂ ಆಸಕ್ತರು ಸ್ವಇಚ್ಛೆಯಿಂದ ಪುಕ್ಕಟೆ ಕರೆಂಟ್ ಸೌಲಭ್ಯ ಬಿಟ್ಟುಕೊಡುವುದು ಲೇಸು. ಸರ್ಕಾರದ ಈ ಚಿಂತನಾ ಕ್ರಮ ಸ್ವಾಗತಾರ್ಹ. ಜತೆಗೆ ಅರ್ಹ ರೈತರ ಐಪಿ ಸೆಟ್​ಗಳಿಗೆ ಗುಣಮಟ್ಟದ ನಿರಂತರ ಏಳು ತಾಸು ವಿದ್ಯುತ್ ಪೂರೈಕೆಯತ್ತ ಗಮನಹರಿಸಬೇಕು.

| ಚಾಮರಸ ಮಾಲಿಪಾಟೀಲ್ ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ.