ನ್ಯೂಸ್

ಅಮೆರಿಕದಲ್ಲಿ ಬದಲಾಗ್ತಿದೆ ಕೆಲಸದ ಟ್ರೆಂಡ್: 24 ಗಂಟೆ ಲಾಗಿನ್​ ಸೈಕಲ್​,​ ದುಡಿಮೆಗಿಲ್ಲ ಸಮಯ ಮಿತಿ ಜೀವನ ಅಧೋಗತಿ ! American employees

American employees : ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ಕೆಲಸದ ದಿನವು ಸದ್ದಿಲ್ಲದೆ ಗುರುತಿಸಲಾಗದ ರೀತಿಯಲ್ಲಿ ವಿಸ್ತರಣೆಯಾಗುತ್ತಿದೆ. ಒಂದು ಕಾಲದಲ್ಲಿ ಬಹುತೇಕ ಕೆಲಸಗಳು ನಿಗದಿತ ಸಮಯಕ್ಕೆ ಆರಂಭವಾಗಿ ನಿಗದಿತ ಸಮಯಕ್ಕೆ ಅಂತ್ಯವಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದ್ದು, ತಡರಾತ್ರಿ ಮೀಟಿಂಗ್​ಗಳು, ತ್ವರಿತ ಮೆಸೇಜ್​ಗಳು ಸೇರಿದಂತೆ ವಾರದ ಏಳು ದಿನಗಳೂ 24 ಗಂಟೆಯ ಲಾಗಿನ್​ ಸೈಕಲ್​ ಆಗಿ ಪರಿವರ್ತನೆಯಾಗುತ್ತಿದೆ. ಇದರಿಂದ ಜೀವನಕ್ಕೂ- ಕೆಲಸಕ್ಕೂ ಗಡಿ ಎಂಬುದೇ ಇಲ್ಲದಂತಾಗಿದೆ.

ಮೈಕ್ರೋಸಾಫ್ಟ್ ಬಿಡುಗಡೆ ಮಾಡಿರುವ ಇತ್ತೀಚಿನ ವರ್ಕ್​ ಟ್ರೆಂಡ್​ ಇಂಡೆಕ್ಸ್​ (ಉದ್ಯೋಗ ಪ್ರವೃತ್ತಿ ಸೂಚ್ಯಂಕ) ಪ್ರಕಾರ, ಅಮೆರಿಕದಲ್ಲಿ ಶೇ. 40 ರಷ್ಟು ಉದ್ಯೋಗಿಗಳು ತಮ್ಮ ಡಿಜಿಟಲ್ ಕೆಲಸದ ದಿನವನ್ನು ಬೆಳಗ್ಗೆ 6 ಗಂಟೆಯ ಮೊದಲೇ ಪ್ರಾರಂಭಿಸುತ್ತಾರೆ. ಗಮನಾರ್ಹ ಸಂಗತಿ ಏನೆಂದರೆ, ಆರು ಗಂಟೆಗೂ ಮುನ್ನ ಆರಂಭವಾದರೂ ಒಂದು ನಿರ್ಧಿಷ್ಟ ಅವಧಿಗೆ ಅದು ಮುಗಿಯುವುದಿಲ್ಲ. ಶೇ. 29 ರಷ್ಟು ಜನರು ರಾತ್ರಿ 10 ಗಂಟೆಯ ನಂತರ ಮತ್ತೆ ಲಾಗಿನ್ ಆಗುತ್ತಾರೆ. ಸರಾಸರಿ ಉದ್ಯೋಗಿಗಳು ಪ್ರತಿದಿನ 117ಕ್ಕೂ ಹೆಚ್ಚು ಇಮೇಲ್‌ಗಳು ಮತ್ತು 150 ಟೀಮ್​ ಮಸೇಜ್​ಗಳನ್ನು ಕಳುಹಿಸುತ್ತಾರೆ.

ಇದು ಕೇವಲ ವೇಳಾಪಟ್ಟಿಯಲ್ಲಿನ ಬದಲಾವಣೆಯಲ್ಲ, ಇದು ಮಿತಿಗಳಲ್ಲಿನ ವಿಘಟನೆಯಾಗಿದೆ. ಇಂದು ಹೈಬ್ರಿಡ್ ಮತ್ತು ರಿಮೋಟ್ ಮಾದರಿಗಳು ಪ್ರಾಬಲ್ಯ ಸಾಧಿಸುತ್ತಿದ್ದಂತೆ, ಕೆಲಸವು ಇದೀಗ ಸರ್ವವ್ಯಾಪಿಯಾಗಿದೆ. ಹೀಗಾಗಿ ಬೆಳಗ್ಗೆ, ಸಂಜೆ ಮತ್ತು ವಾರಾಂತ್ಯಗಳಲ್ಲಿ ಸಮಯದ ಮಿತಿಯಿಲ್ಲದೇ ಕೆಲಸಗಳು ನಿರಂತವಾಗಿ ಸಾಗುತ್ತಲೇ ಇದೆ. ಹೀಗಾಗಿ ಮೈಕ್ರೋಸಾಫ್ಟ್ ಈ ಟ್ರೆಂಡ್​ ಅನ್ನು "ಅನಂತ ಕೆಲಸದ ದಿನ" ಎಂದು ಕರೆದಿದೆ. ಆಧುನಿಕ ಯುಗದಲ್ಲಿ ಕೆಲಸದ ಸ್ಥಳವು ಎಷ್ಟು ಅಸ್ತವ್ಯಸ್ತಗೊಂಡಿದೆ ಮತ್ತು ಬಳಲುತ್ತಿದೆ ಎಂಬುದರ ಪ್ರತಿಬಿಂಬವನ್ನು ಇದು ತೋರಿಸಿದೆ.

ಕೆಲಸಕ್ಕೆ ಕೊನೆ ಎಂಬುದೇ ಇಲ್ಲ

ಇಂದಿನ ಅಮೆರಿಕದ ಉದ್ಯೋಗಿಗಳಿಗೆ ತಮ್ಮ ದಿನವು ಇನ್ನು ಮುಂದೆ ಪ್ರಯಾಣದೊಂದಿಗೆ ಪ್ರಾರಂಭವಾಗುವುದಿಲ್ಲ ಅಥವಾ ಲಾಗ್-ಆಫ್‌ನೊಂದಿಗೆ ಕೊನೆಗೊಳ್ಳುವುದಿಲ್ಲ. ತಮ್ಮ ಫೋನ್ ಅನ್ನು ಕೈಗೆತ್ತಿಕೊಂಡ ಕ್ಷಣದಿಂದ ಅದರಲ್ಲೂ ಹೆಚ್ಚಾಗಿ ಸೂರ್ಯ ಉದಯಿಸುವ ಮುನ್ನವೇ ತಮ್ಮ ಕೆಲಸ ಪ್ರಾರಂಭವಾಗುತ್ತದೆ. ಆದರೆ, ಆ ಕೆಲಸ ಒಂದು ಸಮಯದಲ್ಲಿ ಮುಗಿಯುವುದೇ ಇಲ್ಲ. ಅದು ತಡರಾತ್ರಿಯವರೆಗೂ ಮುಂದುವರಿಯುತ್ತದೆ. ಈ ಹಿಂದೆ ಕಚೇರಿ ಕೆಲಸವಾಗಿದ್ದ ಕೆಲಸವು ಈಗ ಶಾಶ್ವತ ಪ್ರಕ್ರಿಯೆಯಾಗಿ ಮಾರ್ಪಟ್ಟಿದ್ದು, ಇದು ನಿರಂತರವಾಗಿ ನಡೆಯುತ್ತದೆ. ಈ ಹಿಂದೆ ಕೆಲಸ ಬೇರೆ, ಜೀವನ ಬೇರೆ ಎನ್ನುತ್ತಿದ್ದರು. ಆದರೆ, ಅಮೆರಿಕದಲ್ಲಿ ಕೆಲಸದೊಂದಿಗೆ ಜೀವನವೂ ಸಾಗಬೇಕಿದೆ. ಇದರಿಂದ ವೈಯಕ್ತಿಕ ಜೀವನ ಅಸ್ತವ್ಯಸ್ತಗೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಮೈಕ್ರೋಸಾಫ್ಟ್​ ಬಿಡುಗಡೆ ಮಾಡಿರುವ ಈ ದತ್ತಾಂಶವು ನಿಜಕ್ಕೂ ಕಳವಳಕಾರಿಯಾಗಿದೆ. ಉದ್ಯೋಗಿಗಳಲ್ಲಿ ಹೆಚ್ಚಿನ ಭಾಗವು ಈಗ ಬೆಳಗಿನ ಜಾವದ ಮೊದಲು ಇಮೇಲ್‌ಗಳನ್ನು ಪರಿಶೀಲಿಸುತ್ತಾರೆ. ಅಲ್ಲದೆ, ಊಟದ ಸಮಯದಲ್ಲಿಯೂ ತಂಡದಿಂದ ಯಾವುದಾದರೂ ನೋಟಿಫಿಕೇಶನ್​ಗಳೂ ಬಂದಿರಬಹುದೇ ಎಂದು ಪರಿಶೀಲಿಸುತ್ತಿರುತ್ತಾರೆ. ಇನ್ನು ಸಾಂಪ್ರದಾಯಿಕ ಸಮಯದ ನಂತರವೂ ಅಪೂರ್ಣ ಕೆಲಸಗಳಿಗೆ ಮರಳುತ್ತಾರೆ. ಸಂಜೆಯ ಮೀಟಿಂಗ್​ಗಳು ವರ್ಷದಿಂದ ವರ್ಷಕ್ಕೆ 16% ರಷ್ಟು ಹೆಚ್ಚಾಗಿರುವುದರಿಂದ, ಕಚೇರಿಯು ಕೂಡ ಉದ್ಯೋಗಿಗಳ ಮನೆಯನ್ನೇ ಹಿಂಬಾಲಿಸಿವೆ. ಸೋಜಿಗದ ಸಂಗತಿ ಏನೆಂದರೆ, ಕಚೇರಿಗಳು ಮನೆಯಿಂದ ಎಂದಿಗೂ ಹೊರಡುವುದಿಲ್ಲ ಎಂಬ ಭಾವನೆ ಅನೇಕ ಉದ್ಯೋಗಿಗಳಲ್ಲಿ ಇದೆ.

ಇನ್ನು ಅನಂತ ಕೆಲಸದ ದಿನಗಳಿಗೆ ಕಾರಣಗಳು ತುಂಬಾ ಸಂಕೀರ್ಣವಾಗಿವೆ. ಹೈಬ್ರಿಡ್ ಮತ್ತು ರಿಮೋಟ್ ಕೆಲಸದಿಂದಾಗಿ ಉದ್ಯೋಗಿಗಳು ಭೌತಿಕವಾಗಿ ಕಚೇರಿಯಿಂದ ದೂರವಿರುತ್ತಾರೆ. ಆದರೆ, ಯಾವಾಗಲೂ ಡಿಜಿಟಲ್ ರೂಪದಲ್ಲಿ ಇರುತ್ತಾರೆ. ಇದರಿಂದ ಹೆಚ್ಚು ಉತ್ಪಾದಕವಾಗಿರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಒತ್ತಡದೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ, ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಇರಲು ಮತ್ತು ವಿರಳವಾಗಿ ಸಂಪರ್ಕ ಕಡಿತಗೊಳಿಸಲು ಪ್ರೇರೇಪಿಸುತ್ತದೆ. ಪ್ರತಿ 1.75 ನಿಮಿಷಗಳಿಗೊಮ್ಮೆ ಉದ್ಯೋಗಿಗಳ ಕೆಲಸದಲ್ಲಿ ಅಡಚಣೆ ಉಂಟಾಗುತ್ತಿದ್ದು, ಇದರ ಪರಿಣಾಮವಾಗಿ ದಿನಕ್ಕೆ 275 ಗೊಂದಲಗಳು ಉಂಟಾಗುತ್ತವೆ. ಹೆಚ್ಚಿನ ಕೆಲಸದ ಹೊರತಾಗಿಯೂ, ಮೀಟಿಂಗ್​ಗಳು, ಇಮೇಲ್‌ಗಳು, ಚಾಟ್‌ಗಳು ಮತ್ತು ಕರೆಗಳಲ್ಲಿ ಉದ್ಯೋಗಿಗಳ ಗಮನವು ವಿಭಜನೆಯಾಗುವುದರಿಂದ ನಿಜವಾದ ಉತ್ಪಾದಕತೆಯು ದುರ್ಬಲಗೊಳ್ಳುತ್ತದೆ ಎಂದು ಮೈಕ್ರೋಸಾಫ್ಟ್​ ಹೇಳಿದೆ. (ಏಜೆನ್ಸೀಸ್​)