ನ್ಯೂಸ್

ದೇಶದಲ್ಲಿ 40 ಲಕ್ಷ ಉದ್ಯೋಗ ಸೃಷ್ಟಿ: ಒಟ್ಟು 10 ರಾಜ್ಯಗಳಲ್ಲಿ ಹನ್ನೆರಡು ಕೈಗಾರಿಕಾ ಸ್ಮಾರ್ಟ್​ಸಿಟಿ ಸ್ಥಾಪನೆ

ನವದೆಹಲಿ: ವಿಕಸಿತ ಭಾರತದ ಕನಸು ನನಸಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿರುವ ಕೇಂದ್ರ ಸರ್ಕಾರ ದೇಶದಲ್ಲಿ 10 ಲಕ್ಷ ನೇರ ಹಾಗೂ 30 ಲಕ್ಷ ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ 12 ಕೈಗಾರಿಕಾ ಸ್ಮಾರ್ಟ್ ಸಿಟಿ ಸ್ಥಾಪನೆಗೆ ತೀರ್ವನಿಸಿದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ (ಎನ್​ಐಸಿಡಿಪಿ) ಅಡಿ ಈ ಸ್ಮಾರ್ಟ್ ಸಿಟಿಗಳನ್ನು ನಿರ್ವಿುಸುವುದಕ್ಕೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ.

10 ರಾಜ್ಯಗಳಲ್ಲಿ ತಲೆ ಎತ್ತಲಿರುವ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳ ಸ್ಥಾಪನೆಗೆ 28,602 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಗ್ರೀನ್​ಫೀಲ್ಡ್ ಸ್ಮಾರ್ಟ್ ಸಿಟಿ ರೂಪದಲ್ಲಿ ಅಂತಾರಾಷ್ಟ್ರೀಯ ಮಾನದಂಡದೊಂದಿಗೆ ಸ್ಥಾಪಿಸಲಾಗುವುದು. ಒಟ್ಟಾರೆ ಕೈಗಾರಿಕಾ ಕಾರಿಡಾರ್ ಯೋಜನೆಗಳು ದೇಶದ ಕೈಗಾರಿಕಾ ಪ್ರದೇಶಗಳಲ್ಲಿ ಭಾರಿ ಪರಿವರ್ತನೆ ಉಂಟು ಮಾಡಲಿವೆ. ಜತೆಗೆ, ದೇಶದ ಆರ್ಥಿಕ ಪ್ರಗತಿಗೆ ಮಹತ್ತರ ಕೊಡುಗೆ ನೀಡಲಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಪುಟ ಸಭೆ ಬಳಿಕ ಹೇಳಿದರು.

ಈ ಯೋಜನೆಗಳು 1.52 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ವಿನಿಯೋಜನೆ ಸಾಮರ್ಥ್ಯ ಸೃಷ್ಟಿಸಲಿವೆ ಎಂದು ವಿಶ್ಲೇಷಿಸಲಾಗಿದೆ. ವಿಕಸಿತ ಭಾರತ ದೃಷ್ಟಿಗೆ ಅನುಗುಣವಾಗಿ ಜಾಗತಿಕ ಮೌಲ್ಯ ಸರಣಿಯಲ್ಲಿ ಹೂಡಿಕೆದಾರರಿಗೆ ಹಂಚಿಕೆಗೆ ಸಿದ್ಧ ಭೂಮಿ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರಿಂದ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲದೆ ಜಾಗತಿಕ ಸ್ಪರ್ಧಾತ್ಮಕತೆಯೂ ಉಂಟಾಗಲಿದೆ. ಹತ್ತು ರಾಜ್ಯಗಳಲ್ಲಿ ವ್ಯಾಪಿಸಿರುವ ಮತ್ತು ಆರು ಪ್ರಮುಖ ಕಾರಿಡಾರ್​ಗಳಲ್ಲಿ ಕಾರ್ಯತಂತ್ರಾತ್ಮಕವಾಗಿ ಯೋಜಿಸಿರುವ ಈ ಯೋಜನೆಗಳು ಉತ್ಪಾದನಾ ಸಾಮರ್ಥ್ಯ ಮತ್ತು ಆರ್ಥಿಕ ಪ್ರಗತಿ ಹೆಚ್ಚಿಸುವ ಭಾರತದ ಅನ್ವೇಷಣೆಯಲ್ಲಿ ಮಹತ್ವದ ಪ್ರಗತಿಯನ್ನು ಪ್ರತಿನಿಧಿಸಲಿವೆ ಎಂದು ವಿಶ್ಲೇಷಿಸಲಾಗಿದೆ. ಪ್ರಧಾನಮಂತ್ರಿ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾ್ಯನ್​ಗೆ ಹೊಂದಿಕೊಂಡಂಥ ಈ ಯೋಜನೆಗಳು

ಬಹುವಿಧಾನ ಸಂಪರ್ಕ ಮೂಲಸೌಕರ್ಯ ಒಳಗೊಂಡಿರಲಿವೆ. ಈ ಮೂಲಕ ಜನರು, ಸರಕು ಹಾಗೂ ಸೇವೆಗಳಿಗೆ ಸರಾಗ ಚಲನೆ ಲಭ್ಯವಾಗಲಿದೆ. ಆ ಇಡೀ ಪ್ರದೇಶದ ಪರಿವರ್ತನೆಗೆ ಅಭಿವೃದ್ಧಿ ಕೇಂದ್ರವಾಗಿ ಕೈಗಾರಿಕಾ ನಗರಗಳನ್ನು ರೂಪಿಸಲಾಗುತ್ತದೆ.

6,456 ಕೋಟಿ ರೂ. ರೈಲ್ವೆ ಯೋಜನೆಗೆ ಕೇಂದ್ರದ ಸಮ್ಮತಿ: ಹೊಸ ರೈಲು ಮಾರ್ಗ, ಮಲ್ಟಿ ಟ್ರಾ್ಯಕಿಂಗ್ ಯೋಜನೆಗಳು ಸೇರಿದಂತೆ ಒಟ್ಟು 6,456 ಕೋಟಿ ರೂ. ಮೊತ್ತದ ಮೂರು ರೈಲ್ವೆ ಯೋಜನೆಗಳಿಗೂ ಸಂಪುಟ ಸಮಿತಿ ಸಮ್ಮತಿ ನೀಡಿದೆ. ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಛತ್ತೀಸ್​ಗಢದ ಏಳು ಜಿಲ್ಲೆಗಳನ್ನು ಒಳಗೊಂಡ ಮೂರು ರೈಲ್ವೆ ಯೋಜನೆಗಳಿಗೆ ಈ ಅನುಮೋದನೆ ಅನ್ವಯಿಸುತ್ತಿದೆ. ಇದರಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲ 300 ಕಿ.ಮೀ.ಗಳಷ್ಟು ಹೆಚ್ಚಾಗಲಿದ್ದು, 14 ಹೊಸ ರೈಲು ನಿಲ್ದಾಣಗಳು ಕೂಡ ನಿರ್ವಣವಾಗಲಿವೆ. ಜತೆಗೆ 1,300 ಹಳ್ಳಿಗಳಿಗೆ ಸಂಪರ್ಕ ವ್ಯಾಪಿಸಲಿದ್ದು, ಅಂದಾಜು 11 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರಾಜ್ಯದ 16 ಜಿಲ್ಲೆಗಳಿಗೆ ಎಫ್​ಎಂ ಕೇಂದ್ರ: ಕರ್ನಾಟಕದ 16 ಜಿಲ್ಲೆಗಳು ಸೇರಿದಂತೆ ದೇಶದ 234 ಹೊಸ ನಗರಗಳಲ್ಲಿ ಖಾಸಗಿ ಎಫ್​ಎಂ ಕೇಂದ್ರಗಳನ್ನು ತೆರೆಯುವುದಕ್ಕೂ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಇದರಿಂದ ಸ್ಥಳೀಯ ಆಚಾರ, ವಿಚಾರಗಳು ಮಾತೃಭಾಷೆಯಲ್ಲೇ ಹೊರಹೊಮ್ಮುವ ಜತೆಗೆ ಹೊಸ ಉದ್ಯೋಗಾವಕಾಶ ಸೃಷ್ಟಿಗೂ ಪ್ರಯೋಜನವಾಗಲಿದೆ. ದೇಶದ 234 ನಗರಗಳಲ್ಲಿ ಪ್ರೖೆವೇಟ್ ಎಫ್​ಎಂ ರೇಡಿಯೋ ಫೇಸ್-3 ಪಾಲಿಸಿಯಡಿ 784.87 ಕೋಟಿ ರೂ. ಮೊತ್ತದ ಅಂದಾಜು ಮೀಸಲು ಬೆಲೆಯ 730 ಚಾನೆಲ್​ಗಳ ಇ-ಆಕ್ಷನ್ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ?: ಬಾಗಲಕೋಟೆ-3, ಬೆಳಗಾವಿ-4, ಬಳ್ಳಾರಿ-4, ಬೀದರ್-3, ವಿಜಯಪುರ-4, ಚಿಕ್ಕಮಗಳೂರು-3, ಚಿತ್ರದುರ್ಗ-3, ದಾವಣಗೆರೆ-4, ಗದಗ ಬೆಟಗೇರಿ-3, ಹಾಸನ-3, ಹೊಸಪೇಟೆ-3, ಕೋಲಾರ-3, ರಾಯಚೂರು-3, ಶಿವಮೊಗ್ಗ-4, ತುಮಕೂರು-3, ಉಡುಪಿ-3.

ಹೊಸ ಕೈಗಾರಿಕೆ ಸಿಟಿ

1. ಖುರ್ಷಿಯಾ-ಉತ್ತರಾಖಂಡ

2. ರಾಜಪುರ-ಪಾಟಿಯಾಲ, ಪಂಜಾಬ್

3. ದಿಘಿ-ಮಹಾರಾಷ್ಟ್ರ

4. ಆಗ್ರಾ-ಉ.ಪ್ರದೇಶ

5. ಪಾಲಕ್ಕಾಡ್- ಕೇರಳ

6. ಗಯಾ-ಬಿಹಾರ

7. ಪ್ರಯಾಗ್​ರಾಜ್-ಉ.ಪ್ರದೇಶ

8. ಜಹೀರಾಬಾದ್-ತೆಲಂಗಾಣ

9. ಕೊಪ್ಪಾರ್ತಿ-ಆಂಧ್ರಪ್ರದೇಶ

10. ಓರ್ವಕಲ್-ಆಂಧ್ರಪ್ರದೇಶ

11. ಜೋಧ್​ಪುರ್-ಪಾಲಿ, ರಾಜಸ್ಥಾನ್

12ನೇ ನಗರ ಘೋಷಣೆ ಬಾಕಿ

ಕೃಷಿ ಮೂಲಸೌಕರ್ಯ ನಿಧಿ ವಿಸ್ತರಣೆ: ‘ಕೃಷಿ ಮೂಲಸೌಕರ್ಯ ನಿಧಿ’ಯ ಕೇಂದ್ರ ವಲಯ ಯೋಜನೆಯ ವಿಸ್ತರಣೆಗೂ ಸಂಪುಟ ಅನುಮೋದನೆ ನೀಡಿದೆ. ಯೋಜನೆಯನ್ನು ಹೆಚ್ಚು ಪರಿಣಾಮಕಾರಿ ಆಗಿಸುವ ಮೂಲಕ ಇನ್ನಷ್ಟು ಒಳಗೊಳ್ಳುವಂತೆ ಮಾಡುವಲ್ಲಿ ಇ-ವಿಸ್ತರಣೆ ಮಾಡಲಾಗಿದೆ. ಈ ಕ್ರಮದಿಂದ ಸಮುದಾಯ ಕೃಷಿ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳ ಅಭಿವೃದ್ಧಿಗೆ ಅನುಕೂಲ ನಿರೀಕ್ಷಿಸಲಾಗಿದೆ.